
ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕುವುದಾಗಿ ಭಾರತ ಈಗ ಹೇಳುತ್ತಿದೆ. ಆದರೆ, ಈಗಾಗಲೇ ಸಮಯ ಮೀರಿಹೋಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ‘ಟ್ರುತ್’ನಲ್ಲಿ ಟ್ರಂಪ್ ಈ ಕುರಿತು ಪೋಸ್ಟ್ ಮಾಡಿದ್ದಾರೆ.ಭಾರತವು ಅಮೆರಿಕಕ್ಕೆ ಅಪಾರ ಪ್ರಮಾಣದ ಸರಕುಗಳನ್ನು ರಫ್ತು ಮಾಡುತ್ತದೆ. ಆದರೆ, ನಾವು ಅವರಿಗೆ ಅತಿ ಕಡಿಮೆ ಪ್ರಮಾಣದ ಸರಕುಗಳನ್ನು ಮಾರಾಟ ಮಾಡುತ್ತಿದ್ದೇವೆ. ಭಾರತ ನಮ್ಮ ವಸ್ತುಗಳ ಮೇಲೆ ವಿಧಿಸಿರುವ ಹೆಚ್ಚಿನ ಪ್ರಮಾಣದ ಸುಂಕವೇ ಇದಕ್ಕೆ ಕಾರಣವಾಗಿದೆ. ಹಲವು ದಶಕಗಳಿಂದಲೂ ಇದು ಹೀಗೆಯೇ ಇದೆ’ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
‘ಭಾರತವು ಬಹುತೇಕ ತೈಲ, ಮಿಲಿಟರಿ ಉತ್ಪನ್ನಗಳನ್ನು ರಷ್ಯಾದಿಂದಲೇ ಖರೀದಿಸುತ್ತಿದ್ದು, ಅಮೆರಿಕದಿಂದ ಅತ್ಯಲ್ಪ ಖರೀದಿ ಮಾಡುತ್ತಿದೆ. ಈ ವಿಚಾರವು ಕೆಲವೇ ಮಂದಿಗಷ್ಟೇ ತಿಳಿದಿದೆ. ಈಗ ಸಂಪೂರ್ಣ ಸುಂಕವನ್ನು ಕಡಿತಗೊಳಿಸುವ ವಿಚಾರವನ್ನು ಭಾರತ ಪ್ರಸ್ತಾಪಿಸುತ್ತಿದೆ. ಆದರೆ, ಸಮಯ ಮೀರಿ ಹೋಗಿದೆ. ಭಾರತ ಈ ವಿಚಾರವನ್ನು ಹಲವು ವರ್ಷಗಳ ಹಿಂದೆಯೇ ಯೋಚಿಸಬೇಕಿತ್ತು’ ಎಂದೂ ಟ್ರಂಪ್ ಹೇಳಿದ್ದಾರೆ.
ತಿಯಾನ್‌ಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯ ಭಾಗವಾಗಿ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಿರುವ ಬೆನ್ನಲ್ಲೇ ಟ್ರಂಪ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ.






