
ಕೊಲಂಬೊ: ಕಳೆದ 7 ದಶಕಗಳಿಂದ ಅಡಕೆಯ ಬಗ್ಗೆ ತಗಾದೆ ಮುಂದುವರಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO), ಇದೀಗ ಕ್ಯಾನ್ಸರ್ ಕಾರಕನೆಂಬ ನೆಪದಲ್ಲಿ ಅಡಕೆಯನ್ನು ನಿಷೇಧಿಸಲು ರಾಷ್ಟ್ರಗಳಿಗೆ ಕರೆ ನೀಡಿದೆ.
ಶ್ರೀಲಂಕಾದಲ್ಲಿ ನಡೆದ ಆಗ್ನೇಯ ಏಷ್ಯಾ ಒಕ್ಕೂಟದೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಆಯೋಜಿಸಿದ್ದ ಸಮಾವೇಶ ಅಕ್ಟೋಬರ್ 16 ರಂದು ಮುಕ್ತಾಯಗೊಂಡಿತು. ಭಾರತ, ಬಾಂಗ್ಲಾದೇಶ, ಭೂತಾನ್, ಉತ್ತರ ಕೊರಿಯಾ, ಮಾಲ್ಡೀವ್ಸ್, ಮಯನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ದೇಶಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದವು.
ಕ್ಯಾನ್ಸರ್ ಕಾರಕ ವಸ್ತುಗಳ ಕುರಿತು ನಡೆದ ಚರ್ಚೆಯಲ್ಲಿ, ಹೊಗೆರಹಿತ ತಂಬಾಕು, ನಿಕೋಟಿನ್ ಹಾಗೂ ಅಡಕೆ ವ್ಯಸನಿಗಳ ಸಂಖ್ಯೆ ಏರಿಕೆಯಾಗುತ್ತಿರುವುದರ ಬಗ್ಗೆ ಚಿಂತನೆ ವ್ಯಕ್ತಪಡಿಸಲಾಯಿತು. ಒಕ್ಕೂಟದ ದೇಶಗಳಲ್ಲಿ ಒಟ್ಟಾರೆ 28 ಕೋಟಿ ವಯಸ್ಕರು ಮತ್ತು 1.1 ಕೋಟಿ ಅಪ್ರಾಪ್ತರು ಇಂತಹ ವ್ಯಸನಿಗಳಾಗಿದ್ದಾರೆ ಎಂದು ವರದಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಹೊಗೆರಹಿತ ತಂಬಾಕು, ನಿಕೋಟಿನ್ ಹಾಗೂ ಅಡಿಕೆ ಉತ್ಪಾದನೆ ಮತ್ತು ಮಾರಾಟದ ಮೇಲಿನ ನಿಯಂತ್ರಣಕ್ಕೆ ಚೌಕಟ್ಟು ರಚಿಸಿ, ರಾಷ್ಟ್ರೀಯ ಶಾಸನ ತರಬೇಕೆಂದು WHO ಸೂಚಿಸಿದೆ. ಜೊತೆಗೆ, ಇವುಗಳ ಉತ್ಪಾದನೆ, ಮಾರಾಟ, ಜಾಹೀರಾತು, ಪ್ರಚಾರ ಹಾಗೂ ಪ್ರಾಯೋಜಕತ್ವವನ್ನು ನಿಷೇಧಿಸುವಂತೆ ಒತ್ತಾಯಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಈ ಶಿಫಾರಸಿನ ಹಿನ್ನೆಲೆಯಲ್ಲಿ, ಅಡಿಕೆ ಉತ್ಪಾದಕ ರಾಷ್ಟ್ರಗಳಲ್ಲಿ ಹೊಸ ಚರ್ಚೆಗೆ ತುತ್ತಾಗುವ ಸಾಧ್ಯತೆ ಇದೆ.






