
ನವದೆಹಲಿ: ಇರಾನ್ ಹಾಗೂ ಇಸ್ರೇಲ್–ಅಮೇರಿಕಾ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವುದರಿಂದ, ಏರ್ ಇಂಡಿಯಾ ಸಂಸ್ಥೆ ಮಧ್ಯಪ್ರಾಚ್ಯದ ಕೆಲವು ಪ್ರಮುಖ ಗಮ್ಯಸ್ಥಾನಗಳಿಗೆ ತನ್ನ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪ್ರಕಟಣೆ ನೀಡಿರುವ ಏರ್ ಇಂಡಿಯಾ, “ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಉಂಟಾಗಿರುವ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಆ ಭಾಗಗಳಲ್ಲಿನ ಪ್ರಮುಖ ಸ್ಥಳಗಳಿಗೆ ನಮ್ಮ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ,” ಎಂದು ತಿಳಿಸಿದೆ.
ಸಂಸ್ಥೆಯ ಪ್ರಕಾರ, ಪರಿಸ್ಥಿತಿಯನ್ನು ಸಮೀಕ್ಷಿಸುತ್ತಿದ್ದು, ಮುಂದಿನ ಬೆಳವಣಿಗೆಗಳ ಆಧಾರದ ಮೇಲೆ ವಿಮಾನ ಸಂಚಾರ ಪುನರಾರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಈಗಾಗಲೇ ಟಿಕೆಟ್ ಬುಕ್ ಮಾಡಿಕೊಂಡಿರುವ ಪ್ರಯಾಣಿಕರಿಗೆ ಮರುಬುಕಿಂಗ್ ಅಥವಾ ಹಣ ಹಿಂತಿರುಗಿಸುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಭದ್ರತಾ ಪರಿಸ್ಥಿತಿ ಅಸ್ಥಿರವಾಗಿರುವ ಹಿನ್ನೆಲೆಯಲ್ಲಿ ಹಲವು ಅಂತರರಾಷ್ಟ್ರೀಯ ವಿಮಾನ ಸಂಸ್ಥೆಗಳು ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ಮಾರ್ಗಗಳಲ್ಲಿ ಬದಲಾವಣೆ ಮಾಡುತ್ತಿರುವುದು ಗಮನಾರ್ಹ







