
ಬಾ ಲಿವುಡ್‌ನ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರ ಜೀವನದ ಸುದೀರ್ಘ ಮತ್ತು ಕಠಿಣ ಅಧ್ಯಾಯವೊಂದು ಸದ್ಯಕ್ಕೆ ಅಂತ್ಯಗೊಂಡಿದೆ. ಸುಮಾರು 9 ಕೋಟಿ ರೂಪಾಯಿಗಳ ಸಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ನಟ ಈಗ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬಂದ ನಂತರ ರಾಜ್‌ಪಾಲ್ ಯಾದವ್ ಅವರು ಮೊದಲು ಕೃತಜ್ಞತೆ ಸಲ್ಲಿಸಿದ್ದು ಬಾಲಿವುಡ್‌ನ ‘ಭಾಯ್‌ಜಾನ್’ ಸಲ್ಮಾನ್ ಖಾನ್ ಅವರಿಗೆ.
ಪ್ರಕರಣದ ಹಿನ್ನೆಲೆ ಏನು? ರಾಜ್‌ಪಾಲ್ ಯಾದವ್ ಅವರ ಕಾನೂನು ಸಂಕಷ್ಟ ಆರಂಭವಾಗಿದ್ದು 2010ರಲ್ಲಿ. ತಮ್ಮ ಸಿನಿಮಾ ನಿರ್ಮಾಣಕ್ಕಾಗಿ ಅವರು ಸುಮಾರು 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ್ದರಿಂದ ಅವರು ಸಾಲ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ಸಾಲ ನೀಡಿದವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಕಾಲ ಕ್ರಮೇಣ ಬಡ್ಡಿ ಮತ್ತು ದಂಡ ಸೇರಿದಂತೆ ಈ ಮೊತ್ತ 9 ಕೋಟಿ ರೂಪಾಯಿ ತಲುಪಿತ್ತು. ಅನೇಕ ಬಾರಿ ಗಡುವು ನೀಡಿದರೂ ಹಣ ಪಾವತಿಸದ ಕಾರಣ, ದೆಹಲಿ ಹೈಕೋರ್ಟ್ ಆದೇಶದಂತೆ 2026ರ ಫೆಬ್ರವರಿ 5 ರಂದು ಅವರು ತಿಹಾರ್ ಜೈಲಿಗೆ ಶರಣಾಗಿದ್ದರು.
ಸಲ್ಮಾನ್ ಖಾನ್ ಮತ್ತು ಮಿತ್ರರ ಬೆಂಬಲ: ಕಷ್ಟದ ಸಮಯದಲ್ಲಿ ಚಿತ್ರರಂಗದ ಗೆಳೆಯರು ರಾಜ್‌ಪಾಲ್ ಬೆನ್ನಿಗೆ ನಿಂತಿದ್ದಾರೆ. ವಿಶೇಷವಾಗಿ ಸಲ್ಮಾನ್ ಖಾನ್ ಅವರು ರಾಜ್‌ಪಾಲ್ ಅವರಿಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ದೊಡ್ಡ ಮಟ್ಟದ ಬೆಂಬಲ ನೀಡಿದ್ದಾರೆ ಎಂದು ಹೇಳಲಾಗಿದೆ. “ಸಲ್ಮಾನ್ ಭಾಯ್ ನನಗೆ ಅಣ್ಣನಿದ್ದಂತೆ, ಅವರು ನನ್ನಂತಹ ಅನೇಕ ಕಲಾವಿದರಿಗೆ ಸದ್ದಿಲ್ಲದೆ ಸಹಾಯ ಮಾಡುತ್ತಾರೆ” ಎಂದು ರಾಜ್‌ಪಾಲ್ ಭಾವುಕರಾಗಿ ನುಡಿದಿದ್ದಾರೆ. ಸಲ್ಮಾನ್ ಮಾತ್ರವಲ್ಲದೆ ಅಜಯ್ ದೇವಗನ್ ಮತ್ತು ಸೋನು ಸೂದ್ ಕೂಡ ಇವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಮತ್ತೆ ಬಣ್ಣ ಹಚ್ಚುವ ತವಕ: ಜೈಲಿನಿಂದ ಬಿಡುಗಡೆಯಾದ ನಂತರ ರಾಜ್‌ಪಾಲ್ ಯಾದವ್ ಅವರು ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ತಮ್ಮ ತಪ್ಪುಗಳಿಂದ ಪಾಠ ಕಲಿತಿರುವ ಅವರು, ಈ ಕಠಿಣ ಸಮಯದಲ್ಲಿ ತಮಗೆ ಸಾಥ್ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಬಾಲಿವುಡ್ ಗೆಳೆಯರ ನಡುವಿನ ಈ ಒಗ್ಗಟ್ಟು ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.







