ಪರೀಕ್ಷೆಯಲ್ಲಿ ಪ್ರಶ್ನೆಗಳ ಉತ್ತರ ಗೊತ್ತಿಲ್ಲದಾಗ ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುವುದು ಸಾಮಾನ್ಯ. ಕೆಲವರು ಖಾಲಿ ಬಿಡುತ್ತಾರೆ, ಕೆಲವರು ಸಂಬಂಧವಿಲ್ಲದ ವಿಷಯಗಳನ್ನು ಬರೆಯುತ್ತಾರೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದ ಭಾವನಾತ್ಮಕ ಮನವಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
“ಸರ್.. ನನಗೆ ಅಪ್ಪ-ಅಮ್ಮ ಇಲ್ಲ ಸರ್. ನೀವೇ ನನಗೆ ಅಪ್ಪ-ಅಮ್ಮ ಇದ್ದಂತೆ. ದಯವಿಟ್ಟು ನನ್ನನ್ನು ಪಾಸ್ ಮಾಡಿ ಸರ್. ನಾನು ಓದಿದ್ದ ಯಾವ ಪ್ರಶ್ನೆಗಳೂ ಪರೀಕ್ಷೆಯಲ್ಲಿ ಬಂದಿಲ್ಲ. ದೇವರು ಇದ್ದಾನೆ ಎಂದು ನಾನು ನಂಬಿದ್ದೇನೆ, ಆ ದೇವರೇ ನೀವೇ ಸರ್. ನಿಮ್ಮ ಕಾಲಿಗೆ ಬೀಳುತ್ತೇನೆ, ನನ್ನನ್ನು ಪಾಸ್ ಮಾಡಿ” ಎಂದು ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ. ಜೊತೆಗೆ, ಮನವಿ ವ್ಯಕ್ತಪಡಿಸುವಂತೆ ಒಂದು ಚಿತ್ರವನ್ನೂ ಬಿಡಿಸಿದ್ದಾನೆ.
ಉತ್ತರಪತ್ರಿಕೆ ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕರು ಇದನ್ನು ನೋಡಿ ಕ್ಷಣಕಾಲ ದಂಗಾಗಿದ್ದಾರೆ ಎನ್ನಲಾಗಿದೆ. ವಿಷಯದ ಉತ್ತರ ಬರೆವುದಕ್ಕಿಂತ ಭಾವನಾತ್ಮಕ ಮನವಿಗೆ ಒತ್ತು ನೀಡಿರುವುದು ಗಮನಸೆಳೆಯುತ್ತಿದೆ.
ಈ ಘಟನೆ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಮೇಲೆ ಇರುವ ಒತ್ತಡ, ಪರೀಕ್ಷಾ ಭೀತಿ ಹಾಗೂ ಮಾನಸಿಕ ಸ್ಥಿತಿಯ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವಿದ್ಯಾರ್ಥಿಯ ಸ್ಥಿತಿಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ಮೌಲ್ಯಮಾಪನದಲ್ಲಿ ನಿಯಮ ಪಾಲನೆ ಮುಖ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.
ಪರೀಕ್ಷೆಯಲ್ಲಿ ಸಾಧನೆಗಾಗಿ ನಿಯಮಿತ ಅಧ್ಯಯನ ಹಾಗೂ ಆತ್ಮವಿಶ್ವಾಸವೇ ಮುಖ್ಯ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.














