ಉಪ್ಪಿನಂಗಡಿ: ಇಲ್ಲಿನ ಕೂಟೇಲುವಿನಲ್ಲಿ ಜೂನ್ 1ರಂದು ಸಂಭವಿಸಿದ್ದ ಲಾರಿ–ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಂಗಳೂರು ಮರೋಳಿ ನಿವಾಸಿ ಭಾರತಿ (48) ಚಿಕಿತ್ಸೆ ಫಲಿಸದೆ ಜೂನ್ 13ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ತೀರ್ಥಯಾತ್ರೆಗೆ ತೆರಳುತ್ತಿದ್ದ ವೇಳೆ ವ್ಯಾಗ್ನರ್ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಕಾರು ಚಾಲಕ ದೀಪಕ್ ಹಾಗೂ ತೀರ್ಥಯಾತ್ರಿಗಳಾದ ಗುರುರಾಜ್, ಧನುಷ್, ಗೀತಾ ಮತ್ತು ಭಾರತಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಗಾಯಾಳುಗಳಲ್ಲಿ ಭಾರತಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದು, ಚಾಲಕ ದೀಪಕ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುರಾಜ್, ಧನುಷ್ ಹಾಗೂ ಗೀತಾ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







