ವಿಡಿಯೋದಲ್ಲಿ ಏನಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಚೆನ್ನೈ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೊಯಂಬತ್ತೂರಿನ ಜನಪ್ರಿಯ ಅನ್ನಪೂರ್ಣ ಹೋಟೆಲ್ ಸರಪಣಿಯ ಮಾಲಕ ಶ್ರೀನಿವಾಸನ್ ನಡುವಿನ ಸಂವಾದದ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಅನುದ್ದೇಶಿತ ಖಾಸಗಿತನ ಉಲ್ಲಂಘನೆ ಮಾಡಿರುವುದಕ್ಕೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಕ್ಷಮೆ ಕೋರಿದ್ದಾರೆ.
ಕುರಿತು ಶುಕ್ರವಾರ ಮಧ್ಯಾಹ್ನ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಣ್ಣಾಮಲೈ, ನಿರ್ಮಲಾ ಸೀತಾರಾಮನ್ ಹಾಗೂ ಶ್ರೀನಿವಾಸನ್ ನಡುವಿನ ಸಂವಾದದ ವೀಡಿಯೊವನ್ನು ಅಜಾಗರೂಕತೆಯಿಂದ ಹಂಚಿಕೊಂಡಿದ್ದಕ್ಕೆ ಪ್ರಾಮಾಣಿಕವಾಗಿ ಕ್ಷಮೆ ಕೋರುವುದಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ತಾನು ಉದ್ಯಮಿ ಶ್ರೀನಿವಾಸನ್ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿಯೂ ಹೇಳಿದ್ದಾರೆ.

ಶ್ರೀನಿವಾಸನ್ ಅವರನ್ನು ತಮಿಳುನಾಡು ಉದ್ಯಮ ಸಮುದಾಯದ ಸ್ತಂಭ ಎಂದು ಶ್ಲಾಘಿಸಿರುವ ಅಣ್ಣಾಮಲೈ, ಅವರು ರಾಜ್ಯ ಮತ್ತು ದೇಶದ ಆರ್ಥಿಕ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಕೊಂಡಾಡಿದ್ದಾರೆ. “ಎಲ್ಲರೂ ಈ ವಿಷಯಕ್ಕೆ ವಿರಾಮ ಹಾಡಬೇಕು ಎಂದ ನಾನು ಮನವಿ ಮಾಡುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ.

ಉದ್ಯಮಿ ಹಾಗೂ ಹಣಕಾಸು ಸಚಿವರ ನಡುವಿನ ಖಾಸಗಿ ಸಂವಾದವನ್ನು ನಮ್ಮ ಪದಾಧಿಕಾರಿಗಳು ಹಂಚಿಕೊಂಡಿರುವ ಕ್ರಿಯೆಯ ಕುರಿತು ತಮಿಳುನಾಡು ಬಿಜೆಪಿಯ ಪರವಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ ಎಂದೂ ಅವರು ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಾಲ್ಗೊಂಡಿದ್ದ ಕೊಯಂಬತ್ತೂರು ಬಿಸಿನೆಸ್ ಫೋರಂನಲ್ಲಿ ಉದ್ಯಮಿ ಶ್ರೀನಿವಾಸನ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ತಮ್ಮ ಹೇಳಿಕೆಗಾಗಿ ಕ್ಷಮೆ ಕೋರುತ್ತಿರುವ ವೀಡಿಯೊವನ್ನು ಕೆಲವು ಬಿಜೆಪಿ ಪದಾಧಿಕಾರಿಗಳು ಹಂಚಿಕೊಂಡಿದ್ದರಿಂದ ಉಂಟಾಗಿರುವ ವಿವಾದದ ಬೆನ್ನಿಗೇ ಅಣ್ಣಾಮಲೈ ಈ ಪೋಸ್ಟ್ ಮಾಡಿದ್ದಾರೆ.

ಶ್ರೀನಿವಾಸನ್ ಅವರು ಕೊಯಂಬತ್ತೂರು ಬಿಸಿನೆಸ್ ಫೋರಂನಲ್ಲಿ ಜಿಎಸ್ಟಿಯನ್ನು ಸರಳೀಕರಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಗ್ರಹಿಸಿದ್ದರು. ಬನ್ ನಂತಹ ಕೆಲವು ಉತ್ಪನ್ನಗಳಿಗೆ ಜಿಎಸ್ಟಿ ಇಲ್ಲವಾದರೆ, ಕ್ರೀಮ್ ಹೊಂದಿರುವ ಬನ್ ಗೆ ಶೇ. 18ರಷ್ಟು ಜಿಎಸ್ಟಿಯನ್ನು ವಿಧಿಸಲಾಗುತ್ತಿದೆ ಎಂಬುದರತ್ತ ಅವರು ಬೊಟ್ಟು ಮಾಡಿದ್ದರು.

ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಿಗೇ, ಶ್ರೀನಿವಾಸನ್ ಅವರು ತಮ್ಮ ಹೇಳಿಕೆಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಖಾಸಗಿಯಾಗಿ ಕ್ಷಮೆ ಯಾಚಿಸುತ್ತಿರುವ, ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ ಎಂದು ಸ್ಪಷ್ಟೀಕರಣ ನೀಡುತ್ತಿರುವ ವೀಡಿಯೊ ಕೂಡಾ ವೈರಲ್ ಆಗಿತ್ತು.
ವೀಡಿಯೊ ವೈರಲ್ ಆದ ಬೆನ್ನಿಗೇ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, “ಸಣ್ಣ ಉದ್ಯಮಗಳ ವರ್ತಕರು ಜಿಎಸ್ಟಿ ಪದ್ಧತಿಯನ್ನು ಸರಳೀಕರಿಸುವಂತೆ ಸಾರ್ವಜನಿಕ ಸೇವಕರಲ್ಲಿ ಮನವಿ ಮಾಡಿದರೆ, ಅವರ ಕೋರಿಕೆಯನ್ನು ದುರಹಂಕಾರ ಮತ್ತು ತೀವ್ರ ಅಗೌರವದಿಂದ ನಡೆಸಿಕೊಳ್ಳಲಾಗಿದೆ” ಎಂದು ಕಿಡಿ ಕಾರಿದ್ದರು.

ಈ ವೀಡಿಯೊ ಕುರಿತು ನಿರ್ಮಲಾ ಸೀತಾರಾಮನ್ ಕ್ಷಮೆ ಯಾಚಿಸಬೇಕು ಎಂದು ತಮಿಳುನಾಡು ಸಿಪಿಐ ಆಗ್ರಹಿಸಿದ್ದರೆ, ಆಡಳಿತಾರೂಢ ಡಿಎಂಕೆ ಪಕ್ಷದ ನಾಯಕಿ ಮತ್ತು ಸಂಸದೆ ಕನಿಮೋಳಿ ಅವರು, “ಕೇಂದ್ರ ಸಚಿವರು ತಮಿಳುನಾಡು ಜನರ ಆತ್ಮಗೌರವವನ್ನು ಪ್ರಚೋದಿಸಬಾರದು” ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!