ಪೆರುವಾಯಿ ಸೆಪ್ಚೆಂಬರ್ 13: ಸ್ವಾತಂತ್ರ್ಯೋತ್ಸವಕ್ಕೆ ದೆಹಲಿಯಿಂದ ಆಹ್ವಾನ ಸ್ವೀಕರಿಸಿದ್ದ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಗುರುವಾರ ನಡೆದಿದ್ದ ಪೆರುವಾಯಿ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯಲ್ಲಿ ಇದೇ ವಿಚಾರವಾಗಿ ಕೋಲಾಹಲವೇ ನಡೆದಿದೆ.
ದೆಹಲಿಗೆ ತೆರಳಲು ಪಂಚಾಯತ್ ಹಣ ಖರ್ಚು ಮಾಡಿದ್ದಾರೆ ಎಂದು ಕೆಲ ಗ್ರಾಮಸ್ಥರು ಆರೋಪ ಮಾಡಿದ್ದರು. ಆದ್ರೆ ಅದು ಸರ್ಕಾರ ಭರಿಸಲಿದ್ದು, ಜಿಲ್ಲಾ ಪಂಚಾಯತ್‌ನಿಂದ ಮರುಪಾವತಿಯಾಗಲಿದೆ ಎಂದು ಪಂಚಾಯತ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.
ಆದ್ರೆ ಇದೇ ವಿಚಾರ ಮುಂದಿಟ್ಟು ಗ್ರಾಮದ ಕೆಲವರು ಅಧ್ಯಕ್ಷರ ವಿರುದ್ಧ ಅವ್ಯವಹಾರದ ಆರೋಪ ಮಾಡಿದ್ದರು. ಸಭೆಯಲ್ಲಿ ಹಂಚಲಾಗಿದ್ದ ಪಂಚಾಯತ್ ಖರ್ಚು ವೆಚ್ಚದ ಪತ್ರದಲ್ಲಿ ಕೆಲವೊಂದು ಕ್ರಮ ಸಂಖ್ಯೆಗಳು ಮಾಯವಾಗಿದ್ದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ಇದೇ ವಿಚಾರವಾಗಿ ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಕಾರಣ ಸಭೆಯಲ್ಲಿ ಗೊಂದಲ ಆರಂಭವಾಗಿತ್ತು.
ಈ ವೇಳೆ ಯತೀಶ್ ಎಂಬವರು ಲೆಕ್ಕ ನೀಡುವ ವಿಚಾರದಲ್ಲಿ ಲೋಪವಾಗಿದ್ದು ಜನರಿಂದ ಕೆಲವು ವಿಚಾರವನ್ನು ಮುಚ್ಚಿಡುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು. ಈ ವೇಳೆ ಪಂಚಾಯತ್ ಅಧ್ಯಕ್ಷೆ ನಫೀಸಾ ಅವರ ಮೇಲೂ ಗುರುತರಆರೋಪಗಳನ್ನು ಮಾಡಿದ್ದರು. ಈ ವಿಚಾರವಾಗಿ ಕೆಂಡಾಮಂಡಲರಾದ ಅಧ್ಯಕ್ಷೆ ನಫೀಸಾ ಸಭೆಯಲ್ಲಿ ತನ್ನ ಉಗ್ರರೂಪ ತೋರಿಸಿದ್ದಾರೆ. ಒಬ್ಬ ಹೆಣ್ಣು ಅನ್ನೋ ಕಾರಣಕ್ಕೆ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಸಭೆಯ ಮುಂದೆ ಪ್ರಸ್ತಾಪಿಸಿದ್ದಾರೆ. ನಾನು ಪಂಚಾಯತ್‌ನಲ್ಲಿ ಒಂದು ರೂಪಾಯಿ ಅವ್ಯವಹಾರ ನಡೆಸಿದ್ರೂ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಅಧಿಕಾರಿಗಳು ನೀಡಿದ ವರದಿಯಲ್ಲಿ ಅವ್ಯವಹಾರ ನಡೆದಿರುವ ಕಾಮಗಾರಿಯ ವಿವರಗಳನ್ನು ಕಿತ್ತು ಹಾಕಲಾಗಿದೆ. ಈ ವಿಚಾರವಾಗಿ ತನಿಖೆ ಆಗ ಬೇಕು ಎಂದು ನಾವು ಒತ್ತಾಯಿಸಿದ್ದೇವೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.