ವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದಲ್ಲಿ ಇಂದು (ಭಾನುವಾರ) ನಡೆಯಬೇಕಿದ್ದ ಚುನಾವಣಾ ರ್‍ಯಾಲಿಯನ್ನು ರದ್ದುಗೊಳಿಸಿ ದೆಹಲಿಗೆ ವಾಪಸ್‌ ಆಗಿದ್ದಾರೆ. ಮಣಿಪುರದ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ ಬಿಜೆಪಿಯ ಪ್ರಚಾರದ ಭಾಗವಾಗಿ ಅವರು, ಕೆಲವು ಚುನಾವಣಾ ರ್‍ಯಾಲಿಗಳಲ್ಲಿ ಭಾಗವಹಿಸಬೇಕಿತ್ತು. ಏಕಾಏಕಿ ಅವುಗಳನ್ನು ರದ್ದುಗೊಳಿಸಿದ್ದಾರೆ. ಮಣಿಪುರದ ಪರಿಸ್ಥಿತಿಯನ್ನು ಪರಿಶೀಲಿಸಲು ಅವರು ದೆಹಲಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ ಎಂದೂ ಮೂಲಗಳು ತಿಳಿಸಿವೆ.

ಮಣಿಪುರದ ಜಿರೀಬಾಮ್‌ ಜಿಲ್ಲೆಯಲ್ಲಿ ಸೋಮವಾರ (ನ.11) ನಾಪತ್ತೆಯಾಗಿದ್ದ ಮೈತೇಯಿ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ಮೂವರು ಮಹಿಳೆಯರು, ಎಂಟು ತಿಂಗಳ ಒಂದು ಹಾಗೂ ಎರಡೂವರೆ ತಿಂಗಳ ಎರಡು ಶಿಶುಗಳ ಮೃತದೇಹಗಳು ಪತ್ತೆಯಾಗಿವೆ.

ನಾಪತ್ತೆಯಾಗಿದ್ದವರ ಮೃತದೇಹಗಳು ಪತ್ತೆಯಾಗುತ್ತಿದ್ದಂತೆಯೇ ಮಣಿಪುರ ಮತ್ತೊಮ್ಮೆ ಉದ್ವಿಗ್ನ ಗೊಂಡಿದೆ. ಉದ್ರಿಕ್ತರ ಗುಂಪು ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರ ಮನೆ ಮೇಲೆ ದಾಳಿ ನಡೆಸಿದೆ. ಇಂಫಾಲದಲ್ಲಿ ಕರ್ಫ್ಯೂ ಜಾರಿ ಮಾಡಿದ್ದು ಕೆಲವು ಜಿಲ್ಲೆಗಳಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಶಾಂತಿ ನೆಲಸಲು ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವಾಲಯವು ಭದ್ರತಾ ಪಡೆಗಳಿಗೆ ಶನಿವಾರ ಸೂಚನೆ ನೀಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!