ಪುತ್ತೂರು, ಜೂನ್ 5: ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದಿದ ಆರೋಪದಡಿ ಯುವಕನೊಬ್ಬನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ತೀರ್ಥಾಕ್ಷ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಪೊಕ್ಸೊ ಕಾಯ್ದೆಯ ಕಲಂ 4, 8, 12, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಕಲಂ 64 ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಅಪ್ರಾಪ್ತ ಬಾಲಕಿ ಫೆಬ್ರವರಿ ತಿಂಗಳಲ್ಲಿ ನಡೆದ ನೇಮೋತ್ಸವವೊಂದರಲ್ಲಿ ಆರೋಪಿಯ ಪರಿಚಯ ಹೊಂದಿದ್ದು, ಬಳಿಕ ಇಬ್ಬರೂ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು. ಕಳೆದ ಕೆಲವು ತಿಂಗಳುಗಳಿಂದ ರಾತ್ರಿ ವೇಳೆ ಬಾಲಕಿ ಮನೆಯಿಂದ ಹೊರಗೆ ಹೋಗುತ್ತಿರುವ ಬಗ್ಗೆ ಕುಟುಂಬ ಸದಸ್ಯರಿಗೆ ಅನುಮಾನ ಉಂಟಾಗಿತ್ತು.
ಜೂನ್ 4ರ ಮಧ್ಯರಾತ್ರಿ ಬಾಲಕಿ ಮನೆಯಲ್ಲಿರದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಸಮೀಪದ ಖಾಲಿ ಜಾಗದಲ್ಲಿ ಬಾಲಕಿ ಹಾಗೂ ಒಬ್ಬ ಯುವಕ ಇರುವುದನ್ನು ಕಂಡು ವಿಚಾರಿಸಿದಾಗ, ಆತ ತೀರ್ಥಾಕ್ಷ ಎಂದು ಬಾಲಕಿ ತಿಳಿಸಿದ್ದಾಳೆ ಎನ್ನಲಾಗಿದೆ.
ಬಾಲಕಿಯ ತಾಯಿಯ ದೂರಿನ ಪ್ರಕಾರ, ಆರೋಪಿಯು ಪ್ರೀತಿಯ ಹೆಸರಿನಲ್ಲಿ ಹಲವು ಬಾರಿ ಭೇಟಿಯಾಗಲು ಕರೆಸಿಕೊಂಡಿದ್ದು, ಬಳಿಕ ಒಂದು ಸಂದರ್ಭದಲ್ಲಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ






