ಬೆಳ್ತಂಗಡಿ: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಪೊಲೀಸರು, ಸುಮಾರು ₹23.67 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2026ರ ಏಪ್ರಿಲ್ 5ರಂದು ಮನೆಯಲ್ಲಿ ನಡೆದ ಚಿನ್ನಾಭರಣ ಮತ್ತು ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದ್ದ ಅಪರಾಧ ಸಂಖ್ಯೆ 38/2026ರ ತನಿಖೆ ವೇಳೆ ಮೇ 15ರಂದು ಬಂಟ್ವಾಳದ ಕೊಳ್ನಾಡು ಮೂಲದ, ಪ್ರಸ್ತುತ ಕಾಸರಗೋಡಿನಲ್ಲಿ ವಾಸವಾಗಿರುವ ಹಮೀದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕಳ್ಳತನಕ್ಕೆ ಬಳಸಿದ್ದ ಕಾರನ್ನು ಕೂಡ ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಹಮೀದ್ ನೀಡಿದ ಮಾಹಿತಿಯ ಆಧಾರದ ಮೇಲೆ ಜೂನ್ 7ರಂದು ಮತ್ತೋರ್ವ ಆರೋಪಿ ಜಾಬೀರ್ ಅಲಿಯಾಸ್ ಜಾಬೀ (38) ಅವರನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಪುಂಜಾಲಕಟ್ಟೆ ಠಾಣೆ ಪ್ರಕರಣಕ್ಕೆ ಸಂಬಂಧಿಸಿದ 68.690 ಗ್ರಾಂ ಚಿನ್ನಾಭರಣ ಮತ್ತು ₹2 ಲಕ್ಷ ನಗದು, ಹಾಗೆಯೇ ಉಪ್ಪಿನಂಗಡಿ ಠಾಣೆಯ ಅಪರಾಧ ಸಂಖ್ಯೆ 28/2025 ಪ್ರಕರಣಕ್ಕೆ ಸಂಬಂಧಿಸಿದ 21.810 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಯಿತು.
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹23.67 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದಲ್ಲದೆ, ಆರೋಪಿಗಳು ಉಪ್ಪಿನಂಗಡಿ, ಬಂಟ್ವಾಳ ನಗರ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ತಲಾ ಒಂದೊಂದು ಪ್ರಕರಣ ಸೇರಿದಂತೆ ಒಟ್ಟು ಐದು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಕರಣಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಪ್ರಕರಣದ ಪತ್ತೆ ಕಾರ್ಯಾಚರಣೆಯನ್ನು ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ ನಡೆಸಲಾಯಿತು. ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್., ಉಪ್ಪಿನಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕ ನಾಗರಾಜ್ ಹೆಚ್.ಇ., ಪುಂಜಾಲಕಟ್ಟೆ ಠಾಣೆಯ ಪಿಎಸ್‌ಐ ರಾಜೇಶ್ ಕೆ.ವಿ. ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.







