ವಿಟ್ಲ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವಿಟ್ಲ ಕಸಬಾ ನಿವಾಸಿ ಲಕ್ಷ್ಮಣಗೌಡ (54) ಅವರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಜೂನ್ 26ರ ರಾತ್ರಿ ವಿಟ್ಲ ಮಂಗಿಲಪದವು ಬಸ್ ತಂಗುದಾಣದ ಬಳಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ನಿರೀಕ್ಷಕ ಪ್ರಕಾಶ ದೇವಾಡಿಗ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿತು.
ಈ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಲಕ್ಷ್ಮಣಗೌಡ ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ, ವಿವಿಧ ಮಾದರಿಯ ಒಟ್ಟು 4.5 ಲೀಟರ್ ಮದ್ಯ ಹಾಗೂ ಮದ್ಯ ಮಾರಾಟದಿಂದ ಸಂಗ್ರಹಿಸಲಾಗಿದ್ದ ₹300 ನಗದು ಪತ್ತೆಯಾಯಿತು.
ಯಾವುದೇ ಪರವಾನಿಗೆ ಇಲ್ಲದೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಮದ್ಯವನ್ನು ಸಂಗ್ರಹಿಸಿಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ವಶಪಡಿಸಿಕೊಂಡ ಮದ್ಯವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 141/2026ರಡಿ ಕರ್ನಾಟಕ ಅಬಕಾರಿ ಕಾಯ್ದೆ, 1965ರ ಕಲಂ 15, 32 ಮತ್ತು 34ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.






