ಪುತ್ತೂರು: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಬೀಡಿ, ಸಿನಿ ಹಾಗೂ ಲೈಮ್‌ಸ್ಟೋನ್–ಡೋಲೊಮೈಟ್ ಗಣಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು (ವಿದ್ಯಾರ್ಥಿವೇತನ) ಪಡೆಯಲು ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರಥಮ ತರಗತಿಯಿಂದ ವೃತ್ತಿಪರ ಕೋರ್ಸ್‌ಗಳವರೆಗೆ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (NSP) https://scholarships.gov.in� ಮೂಲಕ ಅರ್ಜಿ ಸಲ್ಲಿಸಬಹುದು. ಕೋರ್ಸ್‌ಗೆ ಅನುಗುಣವಾಗಿ ವಾರ್ಷಿಕ ₹1,000ರಿಂದ ₹25,000ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ವಿದ್ಯಾರ್ಥಿವೇತನ ಪಡೆಯಲು ಒನ್ ಟೈಮ್ ರಿಜಿಸ್ಟ್ರೇಷನ್ (OTR) ಕಡ್ಡಾಯವಾಗಿದ್ದು, ಆಧಾರ್ ಸಂಖ್ಯೆ, ಆಧಾರ್‌ಗೆ ಜೋಡಿಸಲಾದ ವೈಯಕ್ತಿಕ ಬ್ಯಾಂಕ್ ಖಾತೆ ಹಾಗೂ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಆದಾಯ ಪ್ರಮಾಣಪತ್ರ ಮತ್ತು ಸಂಬಂಧಿತ ಕಾರ್ಮಿಕರ ಗುರುತಿನ ಚೀಟಿಯನ್ನು ಅಪ್‌ಲೋಡ್ ಮಾಡಬೇಕು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
ಪೂರ್ವ ಮೆಟ್ರಿಕ್ (1ರಿಂದ 10ನೇ ತರಗತಿ): ಆಗಸ್ಟ್ 31, 2026
ಉತ್ತರ ಮೆಟ್ರಿಕ್ (11ನೇ ತರಗತಿ ಹಾಗೂ ಮೇಲ್ಪಟ್ಟ ಕೋರ್ಸ್‌ಗಳು): ಅಕ್ಟೋಬರ್ 31, 2026
ಪುತ್ತೂರು ಹಾಗೂ ಸುತ್ತಮುತ್ತಲಿನ ಬೀಡಿ ಕಾರ್ಮಿಕರ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯುವಂತೆ ಜಾಗೃತಿ ಮೂಡಿಸುವಂತೆ ಪುತ್ತೂರಿನ ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ವೈದ್ಯಾಧಿಕಾರಿ ಸ್ಥಳೀಯ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪುತ್ತೂರಿನ ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಡಿಸ್ಪೆನ್ಸರಿಯನ್ನು ಸಂಪರ್ಕಿಸಬಹುದು.







