ಉಪ್ಪಿನಂಗಡಿ, ಜು.17: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಖೋಟಾ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುತೇಶ್ ಕೆ.ಪಿ. ನೇತೃತ್ವದಲ್ಲಿ ಜು.16ರಂದು ಬೆಳಗಿನ ಜಾವ ದಾಳಿ ನಡೆಸಿದ ವೇಳೆ ಆರೋಪಿಗಳಾದ ಇಬ್ರಾಹಿಂ, ಶರೀಪ, ಸಂದೀಪ ಪುಂಡಲಿಕ ಶೋಳಂಬಿ, ಮಹಮ್ಮದ್ ನಬಾಸ್, ಸಲ್ಮಾನ್ ಫಾರೀಸ್, ಸಿರಾಜುದ್ದೀನ್ ಹಾಗೂ ಇರ್ಷಾದ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಖೋಟಾ ನೋಟು ತಯಾರಿಕೆಗೆ ಕಟ್ಟಡವನ್ನು ಬಾಡಿಗೆಗೆ ಒದಗಿಸಿದ್ದ ಸ್ಥಳೀಯ ವ್ಯಕ್ತಿಯೂ ಬಂಧಿತರಲ್ಲಿ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ದಾಳಿಯ ವೇಳೆ ₹500 ಮುಖಬೆಲೆಯ ಒಂದು ಖೋಟಾ ನೋಟು, ₹500 ನೋಟುಗಳಂತೆ ಮುದ್ರಿಸಲಾದ 21 ಎ-4 ಗಾತ್ರದ ಹಾಳೆಗಳು, ಕಂಪ್ಯೂಟರ್, ಜೆರಾಕ್ಸ್ ಯಂತ್ರ, ವಿವಿಧ ಸೀಲ್‌ಗಳು ಸೇರಿದಂತೆ ಖೋಟಾ ನೋಟು ತಯಾರಿಕೆಗೆ ಬಳಸಲಾಗುತ್ತಿದ್ದ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಲವು ನೋಟುಗಳು ಒಂದು ಬದಿಯಲ್ಲಿ ಮಾತ್ರ ಮುದ್ರಿತವಾಗಿದ್ದವು ಎಂದು ತಿಳಿದುಬಂದಿದೆ.ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 178 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.ಈ ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಬಿಂದು ಮಣಿ ಆರ್.ಎನ್., ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಸಿಬ್ಬಂದಿ, ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಘಟಕದ ಪೊಲೀಸ್ ನಿರೀಕ್ಷಕ ನಂದಕುಮಾರ್ ಹಾಗೂ ಅವರ ತಂಡ ಉಪ್ಪಿನಂಗಡಿ ಪೊಲೀಸರಿಗೆ ಸಹಕಾರ ನೀಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!