ಪುತ್ತೂರು: ಲ್ಯಾಬೋರೇಟರಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಹಾಗೂ ಗುಣಮಟ್ಟದ ವೈದ್ಯಕೀಯ ಪರೀಕ್ಷಾ ಸೇವೆಗಳನ್ನು ನೀಡುತ್ತಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ವ್ಯವಸ್ಥಾಪಕ ನಿರ್ದೇಶಕ ಚೇತನ್ ಪ್ರಕಾಶ್ ಕಜೆ ಅವರು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್ಸ್–2026’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ವೈದ್ಯರ ದಿನಾಚರಣೆಯ ಅಂಗವಾಗಿ ಜುಲೈ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವೈದ್ಯರು, ಆರೋಗ್ಯ ಸಂಸ್ಥೆಗಳು ಹಾಗೂ ವೃತ್ತಿಪರರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.ವೈದ್ಯಕೀಯ ಪ್ರಯೋಗಾಲಯ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಹಾಗೂ ಸೇವಾ ಮನೋಭಾವದಿಂದ ಚೇತನ್ ಪ್ರಕಾಶ್ ಕಜೆ ಅವರು 2004ರಲ್ಲಿ ಧನ್ವಂತರಿ ಆಸ್ಪತ್ರೆಯಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯನ್ನು ಆರಂಭಿಸಿದರು. ಆರಂಭದಿಂದಲೇ ನಿಖರ, ತ್ವರಿತ, ವಿಶ್ವಾಸಾರ್ಹ ಹಾಗೂ ಪಾರದರ್ಶಕ ಪರೀಕ್ಷಾ ಸೇವೆಗಳನ್ನು ಜನಸಾಮಾನ್ಯರಿಗೆ ಒದಗಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಾ ಪ್ರಯೋಗಾಲಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ.2006ರಿಂದ ಅತ್ಯಾಧುನಿಕ ಸ್ವಯಂಚಾಲಿತ (Automation) ತಂತ್ರಜ್ಞಾನಕ್ಕೆ ಒತ್ತು ನೀಡಿರುವ ಸಂಸ್ಥೆಯು ಸಂಪೂರ್ಣ ಸ್ವಯಂಚಾಲಿತ ಬಯೋಕೆಮಿಸ್ಟ್ರಿ, ಹೆಮಟಾಲಜಿ, ಮೈಕ್ರೋಬಯಾಲಜಿ, ಇಮ್ಯುನೋಅಸೆ ಸೇರಿದಂತೆ ವಿವಿಧ ಸುಧಾರಿತ ಪರೀಕ್ಷಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದೆ. ಅಲ್ಲದೆ, ಆಸ್ಟ್ರಿಯಾದ ವಿಯೆನ್ನಾದಿಂದ ಆಮದು ಮಾಡಲಾದ ALEX Allergy Explorer ವ್ಯವಸ್ಥೆಯನ್ನು ಅಳವಡಿಸುವ ಮೂಲಕ ದಕ್ಷಿಣ ಕರ್ನಾಟಕದ ಮೊದಲ ಅಲರ್ಜಿ ಪರೀಕ್ಷಾ ಪ್ರಯೋಗಾಲಯ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.ಪ್ರಸ್ತುತ 23ಕ್ಕೂ ಹೆಚ್ಚು ಅತ್ಯಾಧುನಿಕ ವೈದ್ಯಕೀಯ ಪ್ರಯೋಗಾಲಯ ಉಪಕರಣಗಳನ್ನು ಹೊಂದಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ 10 ಶಾಖೆಗಳ ಮೂಲಕ ಗುಣಮಟ್ಟದ ಸೇವೆ ಒದಗಿಸುತ್ತಿದೆ.ವೈದ್ಯರು ಹಾಗೂ ರೋಗಿಗಳ ನಡುವಿನ ವಿಶ್ವಾಸವನ್ನು ಬಲಪಡಿಸುವಲ್ಲಿ ನಿಖರ ಪರೀಕ್ಷಾ ವರದಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಧ್ಯೇಯದೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಹೊಸಹೊಸ ರೋಗಗಳು ಹಾಗೂ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ವೈದ್ಯರಿಗೆ ನಿಖರ ರೋಗನಿರ್ಣಯಕ್ಕೆ ನೆರವಾಗುವ ಪ್ರಯೋಗಾಲಯ ಸೇವೆಗಳನ್ನು ಒದಗಿಸುತ್ತಿದೆ.ಚೇತನ್ ಪ್ರಕಾಶ್ ಕಜೆ ಅವರು ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದು, ರೋಟರಿ ಕ್ಲಬ್ ಪುತ್ತೂರು ಯುವದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, 2020–21ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಪ್ರಯೋಗಾಲಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಜೆಸಿಐ ವತಿಯಿಂದ ‘ಔಟ್‌ಸ್ಟ್ಯಾಂಡಿಂಗ್ ಬಿಸಿನೆಸ್’ ಪ್ರಶಸ್ತಿಯನ್ನೂ ಪಡೆದಿದ್ದಾರೆ.ಧನ್ವಂತರಿ ಆಸ್ಪತ್ರೆಯ ಹೆರಿಗೆ ಮತ್ತು ಪ್ರಸೂತಿ ತಜ್ಞರಾದ ಡಾ. ಚಂದ್ರಶೇಖರ ಹಾಗೂ ಜಾನತಿ ದಂಪತಿಯ ಪುತ್ರರಾದ ಚೇತನ್ ಪ್ರಕಾಶ್ ಕಜೆ ಅವರ ಪತ್ನಿ ಡಾ. ಗೌರಿಪ್ರಸನ್ನ ಅವರು ಧನ್ವಂತರಿ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಂಪತಿಗೆ ಪುತ್ರಿ ಜೀವಿಕಾ ಕಜೆ ಹಾಗೂ ಪುತ್ರ ಆಯುಷ್ಮಾನ್ ಇದ್ದಾರೆ.







