ಉಪ್ಪಿನಂಗಡಿ, ಜು.16: ಬಸ್ ಟೈಮಿಂಗ್ ವಿಚಾರವಾಗಿ ಎರಡು ಖಾಸಗಿ ಬಸ್‌ಗಳ ನಿರ್ವಾಹಕರ ನಡುವೆ ನಡೆದ ಗಲಾಟೆ ಹಲ್ಲೆಗೆ ತಿರುಗಿದ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಜು.14ರಂದು ನಡೆದಿದೆ.ಮಂಗಳೂರು–ಉಪ್ಪಿನಂಗಡಿ ಮಾರ್ಗದಲ್ಲಿ ಸಂಚರಿಸುವ ಅರಾಫಾ ಬಸ್ (ಕೆಎ-19 ಎಡಿ 4799)ನ ನಿರ್ವಾಹಕ ನೌಶಾದ್ ಹಾಗೂ ಲಕ್ಷ್ಮೀ ಬಸ್ (ಕೆಎ-20 ಎಸಿ 5283)ನ ನಿರ್ವಾಹಕ ಖಲಂದರ್ ಅಲಿಯಾಸ್ ಶಾಹಿದ್ ನಡುವೆ ಬಸ್ ಟೈಮಿಂಗ್ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.ಈ ವೇಳೆ ನೌಶಾದ್, ಪ್ರಯಾಣಿಕರು ಕುಳಿತಿದ್ದ ಲಕ್ಷ್ಮೀ ಬಸ್ ಒಳಗೆ ಪ್ರವೇಶಿಸಿ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಶಾಹಿದ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಪ್ರತಿಯಾಗಿ ಶಾಹಿದ್ ಕೂಡ ನೌಶಾದ್ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದು, ಇಬ್ಬರಿಗೂ ರಕ್ತಗಾಯಗಳಾಗಿವೆ.ಗಾಯಗೊಂಡ ಇಬ್ಬರನ್ನೂ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣದಲ್ಲಿ ಮಾರಕಾಸ್ತ್ರ ಬಳಸಿ ಪರಸ್ಪರ ಹಲ್ಲೆ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ ಹಾಗೂ ಪ್ರಯಾಣಿಕರ ಜೀವಕ್ಕೂ ಆತಂಕ ಸೃಷ್ಟಿಸಿದ ಆರೋಪದಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 102/2026ರಡಿ ಬಿಎನ್‌ಎಸ್ ಕಲಂ 115(2), 118(1), 194 ಹಾಗೂ 3(5) ಅನ್ವಯ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.







