ಮಂಗಳೂರು, ಜು.15: ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶದ ಪ್ರಜೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಅದನ್ನು ಪೊಲೀಸರು ಸ್ವಾಗತಿಸುತ್ತಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಬಂಧಿಸಿ ಗಡಿಪಾರು ಮಾಡುವ ಕಾರ್ಯವನ್ನು ಪೊಲೀಸ್ ಇಲಾಖೆ ನಡೆಸಲಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಆದರೆ, ವ್ಯಕ್ತಿಗಳ ದಾಖಲೆಗಳನ್ನು ಪರಿಶೀಲಿಸುವುದು, ವಶಕ್ಕೆ ಪಡೆಯುವುದು ಹಾಗೂ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸರಿಗೆ ಮಾತ್ರ ಇದೆ. ಸಾರ್ವಜನಿಕರು ಅಥವಾ ಸಂಘಟನೆಗಳು ಪೊಲೀಸರ ಕೆಲಸವನ್ನು ತಾವೇ ಮಾಡಲು ಮುಂದಾಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ.ಯಾರಾದರೂ ಸ್ವಯಂಪ್ರೇರಿತವಾಗಿ ವ್ಯಕ್ತಿಗಳನ್ನು ತಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅವರು ಭಾರತೀಯ ನಾಗರಿಕರಾಗಿದ್ದರೆ, ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 341 (ಅಕ್ರಮವಾಗಿ ತಡೆಹಿಡಿಯುವುದು), 506 (ಬೆದರಿಕೆ) ಸೇರಿದಂತೆ, ಹಲ್ಲೆ ಅಥವಾ ಇತರೆ ಕೃತ್ಯಗಳು ನಡೆದಿದ್ದರೆ ಸಂಬಂಧಿತ ಕಾನೂನು ಕಲಂಗಳಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಲಾಗಿದೆ.ಕಳೆದ ವರ್ಷವೂ ಇದೇ ರೀತಿಯ ಪ್ರಕರಣದಲ್ಲಿ ಅಧಿಕಾರದ ಮಿತಿಯನ್ನು ಮೀರಿ ವರ್ತಿಸಿದ್ದ ವ್ಯಕ್ತಿಯೊಬ್ಬರು ಜೈಲು ಸೇರಿದ್ದ ಉದಾಹರಣೆಯನ್ನೂ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.ಇದೇ ವೇಳೆ, ಕೆಲವರು ‘ಖಾಸಗಿ ಆತ್ಮರಕ್ಷಣೆಯ ಹಕ್ಕು’ (Right to Private Defence) ಬಳಸುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಆತ್ಮರಕ್ಷಣೆಯ ಹಕ್ಕು ಆಕಸ್ಮಿಕವಾಗಿ ಎದುರಾಗುವ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಅನ್ವಯಿಸುತ್ತದೆ. ಪತ್ರಿಕಾಗೋಷ್ಠಿ ನಡೆಸಿ ಅಥವಾ ಪೂರ್ವಯೋಜನೆ ರೂಪಿಸಿ, ಬಳಿಕ ಆತ್ಮರಕ್ಷಣೆಯ ಹೆಸರಿನಲ್ಲಿ ಹಲ್ಲೆ ನಡೆಸಿದರೆ ಅದು ಪೂರ್ವಯೋಜಿತ ಹಲ್ಲೆಯಾಗಿ ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಇಂತಹ ಪ್ರಕರಣಗಳಲ್ಲಿ ಬಂಧನದ ಬಳಿಕ ನ್ಯಾಯಾಲಯದಲ್ಲಿ ತಾನು ಆತ್ಮರಕ್ಷಣೆಯ ಹಕ್ಕಿನಡಿ ನಡೆದುಕೊಂಡಿದ್ದೇನೆ ಎಂಬುದನ್ನು ಸಾಬೀತುಪಡಿಸುವ ಹೊಣೆ ಆರೋಪಿಯ ಮೇಲೇ ಇರುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.







