ಸುರತ್ಕಲ್: ಮುಕ್ಕ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ವಾಸವಿದ್ದ ವಸತಿ ಸಂಕೀರ್ಣದ 5ನೇ ಮಹಡಿ ಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷಿತ ನಗರದಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ.ಹುಬ್ಬಳ್ಳಿ ಮೂಲದ ಪ್ರಸ್ತುತ ಮುಕ್ಕ ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿರುವ ಮಹಾಲಕ್ಷ್ಮೀ (20) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.ಮಹಾಲಕ್ಷ್ಮೀ ಮಾನಸಿಕ ಖಿನ್ನತೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದ್ದು, ಆಕೆ ತನ್ನ ಹೆತ್ತವರೊಂದಿಗೆ ಸುಭಾಷಿತ ನಗರದ ವಸತಿ ಸಮುಚ್ಚಯದಲ್ಲಿ 2ನೇ ಅಂತಸ್ತಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಇಂದು ಪೋಷಕರೊಂದಿಗೆ ಕಟೀಲು ದೇವಸ್ಥಾನಕ್ಕೆ ಹೋಗಿ ಹಿಂದಿರುಗಿದ್ದ ಈಕೆ ಏಕಾಏಕಿ ವಸತಿ ಸಮುಚ್ಚಯದ ಐದನೇ ಮಹಡಿಗೆ ಹೋಗಿ ಜಿಗಿದಿದ್ದಾರೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಕೆಯ ಪೋಷಕರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.







