ಉಪ್ಪಿನಂಗಡಿ, ಜು.14: ಹಾರ್ಮುಝ್ ಜಲಸಂಧಿಯ ಒಮನ್ ಕರಾವಳಿ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಶನಿವಾರ ನಡೆದ ಕ್ಷಿಪಣಿ ದಾಳಿಯಿಂದ ರಕ್ಷಿಸಲ್ಪಟ್ಟ 10 ಭಾರತೀಯರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ನಿವಾಸಿ ಯುವ ನಾವಿಕ ರಚನ್ ಆರ್.ಕೆ. ಕೂಡ ಸೇರಿದ್ದಾರೆ.ಮೂರು ವರ್ಷಗಳಿಂದ ಕಾರ್ಗೋ ಶಿಪ್ಪಿಂಗ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ರಚನ್ ಪ್ರಯಾಣಿಸುತ್ತಿದ್ದ ಹಡಗಿನ ಇಂಜಿನ್ ವಿಭಾಗದಲ್ಲಿ ಕ್ಷಿಪಣಿ ದಾಳಿಯ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸಿಬ್ಬಂದಿ ಜೀವ ರಕ್ಷಕ ದೋಣಿಯ ಮೂಲಕ ಹಡಗನ್ನು ತೊರೆದು ಸಮುದ್ರಕ್ಕಿಳಿದಿದ್ದಾರೆ. ಬಳಿಕ ಒಮನ್ ನೌಕಾಪಡೆಯು ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದೆ.ಸದ್ಯ ರಚನ್ ಒಮನ್ ಶಿಪ್ಪಿಂಗ್ ಕಂಪನಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತರಾಗಿದ್ದು, ತಮ್ಮನ್ನು ದುಬೈಗೆ ಕರೆದೊಯ್ಯಲಾಗುತ್ತಿದೆ ಎಂದು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.ತಂದೆಯೊಂದಿಗೆ ಮಾತನಾಡಿದ ರಚನ್, “ದಾಳಿಯ ಬಗ್ಗೆ ಮುನ್ನೆಚ್ಚರಿಕೆ ಮಾಹಿತಿ ನೀಡಲಾಗಿತ್ತು. ಆದರೂ ಹಡಗು ಪ್ರಯಾಣ ಮುಂದುವರಿಸಿದ್ದು, ಮಧ್ಯರಾತ್ರಿ ಸುಮಾರು 2.05ಕ್ಕೆ ಕ್ಷಿಪಣಿ ದಾಳಿ ನಡೆಯಿತು. ಇಂಜಿನ್ ವಿಭಾಗದಲ್ಲಿ ಬೆಂಕಿ ಕಾಣುತ್ತಿದ್ದಂತೆ ನಾವು ಜೀವ ರಕ್ಷಕ ದೋಣಿಯ ಮೂಲಕ ಹಡಗಿನಿಂದ ಹೊರಬಂದೆವು. ಈ ವೇಳೆ ಪುಣೆಯ ನಿವಾಸಿಯಾದ ನಮ್ಮ ಸಹೋದ್ಯೋಗಿಯೊಬ್ಬರು ಕಣ್ಮರೆಯಾಗಿದ್ದಾರೆ. ಉಳಿದವರನ್ನು ಒಮನ್ ನೌಕಾಪಡೆ ರಕ್ಷಿಸಿ ಅಗತ್ಯ ನೆರವು ನೀಡಿದೆ” ಎಂದು ತಿಳಿಸಿದ್ದಾರೆ.ರಚನ್ ಅವರ ತಂದೆ ರೋಹಿತಾಕ್ಷ ಬಾಣಬೆಟ್ಟು ಮಾತನಾಡಿ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಆತಂಕದಲ್ಲಿದ್ದೆವು. ಮಗನಿದ್ದ ಹಡಗಿನ ಮೇಲೆ ದಾಳಿ ನಡೆದ ಸುದ್ದಿ ತಿಳಿದು ತೀವ್ರ ಕಳವಳ ಉಂಟಾಗಿತ್ತು. ಬಳಿಕ ಮಗ ಸುರಕ್ಷಿತವಾಗಿರುವ ಮಾಹಿತಿ ನೀಡಿದಾಗ ಸಮಾಧಾನವಾಯಿತು. ಆದರೆ ಸಹೋದ್ಯೋಗಿಯೊಬ್ಬರು ಕಣ್ಮರೆಯಾಗಿರುವುದು ದುಃಖದ ಸಂಗತಿ. ನಮ್ಮ ಮಗ ಸೇರಿದಂತೆ ಭಾರತೀಯರನ್ನು ರಕ್ಷಿಸಿದ ಒಮನ್ ನೌಕಾಪಡೆಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!