ಮಂಗಳೂರು, ಜು.14: ಸಿಮ್ ನವೀಕರಣ ಮಾಡುವುದಾಗಿ ಹೇಳಿ 23.98 ಲಕ್ಷ ರೂ.ವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜು.8 ಮೊಬೈಲ್ ಸಿಮ್ ಕಂಪೆನಿಯೊಂದರ ಕಸ್ಟಮರ್ ಕೇರ್ ಅಧಿಕಾರಿ ಎಂದು ಹೇಳಿ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ನಿಮ್ಮ ಸಿಮ್ ಕಾರ್ಡ್ 4ಜಿ ಸೇವೆಯಲ್ಲಿದ್ದು, 5ಜಿ-ಗೆ ನವೀಕರಿಸಬೇಕು ಎಂದಿದ್ದ. ಅಲ್ಲದೆ ವೈಯಕ್ತಿಕ ವಿವರಗಳನ್ನು ಆತನೇ ತಿಳಿಸಿದ್ದ. ಅದನ್ನು ನಂಬಿದ ತಾನು 5ಜಿ-ಗೆ ನವೀಕರಿಸಲು ಒಪ್ಪಿಗೆ ನೀಡಿದ್ದೆ. ನಿಮ್ಮ ಇಮೇಲ್‌ಗೆ ಒಂದು ಮೆಸೇಜ್ ಬರಲಿದೆ. ಅದಕ್ಕೆ ಎಸ್ ಎಂದು ಪ್ರತಿಕ್ರಿಯಿಸುವಂತೆ ಮತ್ತು ನವೀಕ ರಣ ಪ್ರಕ್ರಿಯೆಗಾಗಿ ಕೆಲ ಗಂಟೆಗಳ ಕಾಲ ನೆರ್ಟ್‌ವರ್ಕ್ ನಿಷ್ಕ್ರಿಯಗೊಳ್ಳಲಿದೆ ಎಂದಿದ್ದ. ಆತ ತಿಳಿಸಿದಂತೆ ತನ್ನ ಇಮೇಲ್ ಬಂದಿತ್ತು. ಬಳಿಕ ತಾನು ಇನ್ನೊಂದು ನಂಬರ್‌ನಿಂದ ಕರೆ ಮಾಡಿ ಕೇಳಿದಾಗ ಸರ್ವರ್ ಸಮಸ್ಯೆಯಿದ್ದು ಸರಿಯಾಗುತ್ತದೆ ಎಂದಿದ್ದ. ಆ ದಿನವಿಡೀ ಸಿಮ್ ಸರಿಯಾಗಲಿಲ್ಲ. ಜು.9ರಂದು ಸಂಜೆವರೆಗೂ ಅದೇ ಸರಿಯಾಗುತ್ತದೆ ಎಂದು ತಿಳಿಸಿದ್ದ. ಇದರಿಂದ ಅನುಮಾನಗೊಂಡು ಸಂಸ್ಥೆಯ ಸ್ಥಳೀಯ ಕಚೇರಿಗೆ ಹೋಗಿ ಕೇಳಿದಾಗ ತಾನು ಮೋಸ ಹೋಗಿರುವುದು ತಿಳಿಯಿತು. ಜು.10ರಂದು ಬೆಳಗ್ಗೆ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ತನ್ನ ಬ್ಯಾಂಕ್ ಖಾತೆ ಗಳಿಂದ 2,89,000 ರೂ. ಹಾಗೂ ಕ್ರೆಡಿಟ್ ಕಾರ್ಡ್‌ನಿಂದ 9,00,000 ರೂ. ಸಾಲ ಪಡೆದಿರುವುದು ಕಂಡು ಬಂದಿದೆ. ಸಾಲದ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ. ಅದೇ ಬ್ಯಾಂಕ್‌ನ ಮತ್ತೊಂದು ಕ್ರೆಡಿಟ್ ಕಾರ್ಡ್‌ನಿಂದ 4,06,138, ಬೇರೆ ವಿವಿಧ ಬ್ಯಾಂಕ್‌ಗಳ ಕ್ರೆಡಿರ್ಟ್ ಕಾರ್ಡ್ 3,03,000 ರೂ, 5,00,000 ರೂ. ಸಹಿತ ಎರಡು ದಿನ ಒಟ್ಟು 23,98,138 ರೂ.ವನ್ನು ವರ್ಗಾಯಿಸಲಾಗಿದೆ ಎಂದು 43ರ ಹರೆಯದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!