ಪುತ್ತೂರು: ಪುತ್ತೂರು ನಗರಕ್ಕೆ ಹೊಂದಿಕೊಂಡಿರುವ ಕಬಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇವಿರೆ–ಮಾಡತ್ತಾರು–ರಕ್ತೇಶ್ವರಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಿದರು. ಸುಮಾರು 50 ವರ್ಷಗಳಿಂದ ಕಾಲುದಾರಿಯಾಗಿಯೇ ಉಳಿದಿದ್ದ ಈ ರಸ್ತೆಗೆ ಇದೀಗ ರಸ್ತೆ ಭಾಗ್ಯ ಒದಗಿದೆ.ಈ ಭಾಗದ ಜನರು ಹಲವು ದಶಕಗಳಿಂದ ಕಾಲುದಾರಿಯ ಮೂಲಕವೇ ಮುಖ್ಯ ರಸ್ತೆಗೆ ತಲುಪಬೇಕಾಗಿತ್ತು. ರಸ್ತೆ ನಿರ್ಮಾಣದ ಬೇಡಿಕೆ ಹಲವು ಚುನಾವಣೆಗಳ ಸಂದರ್ಭದಲ್ಲಿ ಮುನ್ನೆಲೆಗೆ ಬಂದರೂ, ಚುನಾವಣೆ ಮುಗಿದ ಬಳಿಕ ಮತ್ತೆ ನೆನೆಗುದಿಗೆ ಬೀಳುತ್ತಿತ್ತು. ರಸ್ತೆ ಅಗಲೀಕರಣಕ್ಕೆ ಖಾಸಗಿ ಜಾಗದ ಮಾಲೀಕರ ವಿರೋಧವಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲು ಸಾಧ್ಯವಾಗಿರಲಿಲ್ಲ.ಸ್ಥಳೀಯರು ಶಾಸಕ ಅಶೋಕ್ ರೈ ಅವರ ಗಮನಕ್ಕೆ ಈ ವಿಚಾರ ತಂದ ಬಳಿಕ, ಅವರು ಕೆಲವು ತಿಂಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ರಸ್ತೆ ಎರಡೂ ಬದಿಯ ಖಾಸಗಿ ಜಾಗದ ಮಾಲೀಕರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿ, ರಸ್ತೆ ಅಗಲೀಕರಣಕ್ಕೆ ಇದ್ದ ವಿವಾದವನ್ನು ಬಗೆಹರಿಸಿದರು. ಬಳಿಕ ರಸ್ತೆ ನಿರ್ಮಾಣಕ್ಕೆ ₹15 ಲಕ್ಷ ಅನುದಾನ ಮೀಸಲಿಟ್ಟು ಶಿಲಾನ್ಯಾಸ ನೆರವೇರಿಸಿದರು.ಮುಂದಿನ ದಿನಗಳಲ್ಲಿ ಈ ರಸ್ತೆ ಶೇವಿರೆ–ಮಾಡತ್ತಾರು–ರಕ್ತೇಶ್ವರಿ ವಠಾರದ ಜನರಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಲಿದೆ. ಮಳೆಗಾಲದಲ್ಲಿ ನೀರು ನಿಂತು ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಸಂಚರಿಸಲು ತೊಂದರೆಯಾಗುತ್ತಿದ್ದ ಈ ರಸ್ತೆಯು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ.ಕನಸಲ್ಲೂ ರಸ್ತೆ ನಿರ್ಮಾಣವಾಗುತ್ತದೆ ಎಂದು ಭಾವಿಸಿರಲಿಲ್ಲರಸ್ತೆ ಫಲಾನುಭವಿ ಜೀವನ್ ಮಾತನಾಡಿ, “ಈ ರಸ್ತೆ ನಿರ್ಮಾಣವಾಗುತ್ತದೆ ಎಂದು ಕನಸಲ್ಲೂ ಭಾವಿಸಿರಲಿಲ್ಲ. ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದಾಗ ಸ್ಥಳಕ್ಕೆ ಬಂದು ಪರಿಶೀಲಿಸಿ, ವಿವಾದವನ್ನು ಬಗೆಹರಿಸಿ ರಸ್ತೆ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇದು ನಮ್ಮ ಜೀವನದಲ್ಲಿ ಮರೆಯಲಾಗದ ಘಟನೆ. ಹಿಂದಿನ ಶಾಸಕರು ಭರವಸೆ ನೀಡಿದ್ದರೇ ಹೊರತು ಯಾವುದೇ ಮುತುವರ್ಜಿ ವಹಿಸಿರಲಿಲ್ಲ. ಅಶೋಕ್ ರೈ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ” ಎಂದರು.ಯಾರಿಗೂ ನೋವಾಗದಂತೆ ವಿವಾದ ಬಗೆಹರಿದಿದೆಶಾಸಕ ಅಶೋಕ್ ರೈ ಮಾತನಾಡಿ, “ಈ ರಸ್ತೆಯಲ್ಲಿ ರಕ್ತೇಶ್ವರಿ ವಠಾರದ ಜನರು ಸಂಚರಿಸುತ್ತಿದ್ದರೂ, ಅದು ರಸ್ತೆಯಾಗಿರದೆ ಕಾಲುದಾರಿಯಾಗಿತ್ತು. ಮಳೆಗಾಲದಲ್ಲಿ ನೀರು ನಿಂತು ಜನರು ನಡೆದುಕೊಂಡು ಹೋಗಲು ಕಷ್ಟವಾಗುತ್ತಿತ್ತು. ರಸ್ತೆ ನಿರ್ಮಾಣಕ್ಕೆ ಸಣ್ಣ ತಕರಾರು ಇದ್ದ ಕಾರಣ ಪಕ್ಕದ ಜಾಗದ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗಿದೆ. ಯಾರಿಗೂ ನೋವಾಗದಂತೆ ವಿವಾದ ಪರಿಹಾರವಾಗಿದ್ದು, ಬಹುವರ್ಷಗಳ ಬೇಡಿಕೆ ಈಡೇರಿದ ಸಂತೋಷ ಜನರಲ್ಲಿದೆ. ಮುಂದೆ ಈ ರಸ್ತೆ ಸಂಚಾರಯೋಗ್ಯ ಕಾಂಕ್ರೀಟ್ ರಸ್ತೆಯಾಗಲಿದೆ” ಎಂದು ಹೇಳಿದರು.









