ಕಡಬ: ನಕಲಿ ಚಿನ್ನದ ಆಭರಣಗಳನ್ನು ಅಸಲಿ ಚಿನ್ನವೆಂದು ಬ್ಯಾಂಕ್‌ನಲ್ಲಿ ಅಡವಿಟ್ಟು ₹8.03 ಲಕ್ಷ ಸಾಲ ಪಡೆದು ವಂಚನೆ ಎಸಗಿದ ಆರೋಪದ ಮೇಲೆ ಚಿನ್ನದ ಮೌಲ್ಯಮಾಪಕ ಸೇರಿದಂತೆ ಮೂವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೂಜಿಬಾಳ್ತಿಲದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಈ ವಂಚನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬ್ಯಾಂಕ್ ಆಫ್ ಬರೋಡಾದ ಪುತ್ತೂರು ವಲಯದ ಸಹಾಯಕ ಪ್ರಧಾನ ವ್ಯವಸ್ಥಾಪಕ ಹಾಗೂ ಉಪ ಪ್ರಾದೇಶಿಕ ವ್ಯವಸ್ಥಾಪಕ ಯೋಗೇಶ್ ಎಸ್. ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರಕರಣದಲ್ಲಿ ಪಿಜಕ್ಕಳದ ಲಕ್ಷ್ಮೀ ನಾರಾಯಣ, ಕಡಬದ ಕಂಗುಲೆ ಮನೆಯ ಎ. ಸದಾನಂದ ಹಾಗೂ ನೂಜಿಬಾಳ್ತಿಲದ ಬಳ್ಳೇರಿ ಮನೆಯ ಸತ್ಯಾನಂದ ಗೌಡ ಆರೋಪಿಗಳಾಗಿದ್ದಾರೆ.ಆರೋಪಿಗಳು ವಿವಿಧ ದಿನಾಂಕಗಳಲ್ಲಿ ನಕಲಿ ಚಿನ್ನದ ಆಭರಣಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು, ಅಸಲಿ ಚಿನ್ನವೆಂದು ನಂಬಿಸಿ ಸಾಲ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಬ್ಯಾಂಕಿನ ಚಿನ್ನದ ಮೌಲ್ಯಮಾಪಕರಾದ ಲಕ್ಷ್ಮೀ ನಾರಾಯಣ ಅವರು ಸಾಲಗಾರರೊಂದಿಗೆ ಶಾಮೀಲಾಗಿ ನಕಲಿ ಚಿನ್ನದ ಆಭರಣಗಳನ್ನು ಅಸಲಿ ಚಿನ್ನವೆಂದು ದೃಢೀಕರಿಸಿಕೊಟ್ಟು ವಂಚನೆಗೆ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 318, 316, 61, 336 ಹಾಗೂ 3(5)ರ ಅಡಿಯಲ್ಲಿ ಅ.ಕ್ರ. 142/2026ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!