ಪುತ್ತೂರು: ಹಿಂದೂ ಸಮಾಜವನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಒಗ್ಗೂಡಿಸಿ, ಸಾಮರಸ್ಯ, ಸಂಘಟನೆ ಮತ್ತು ಧಾರ್ಮಿಕ ಜಾಗೃತಿಯ ಸಂದೇಶ ಸಾರುವ ಉದ್ದೇಶದಿಂದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ಗಿರಿಜಾ ಕಲ್ಯಾಣೋತ್ಸವ ಸಮಿತಿಯ ಆಶ್ರಯದಲ್ಲಿ ಡಿ.12 ಮತ್ತು 13ರಂದು ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ.
ಎರಡು ದಿನಗಳ ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ, ಲಕ್ಷ ಬಿಲ್ವಾರ್ಚನೆ, ಕೇಸರಿ ಸಂಗಮ, ಶಿವಾರತಿ, ಧಾರ್ಮಿಕ ಸಭೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕಾಶಿಯ ಗಂಗಾರತಿಯ ಮಾದರಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಶಿವಾರತಿ ಸಮರ್ಪಿಸುವುದು ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ ಎಂದು ಗಿರಿಜಾ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.ಪುತ್ತೂರಿನ ಸುಭದ್ರ ಕಲ್ಯಾಣ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ ಎಲ್ಲ ಬಂಧುಗಳು ಪಕ್ಷ, ಜಾತಿ ಭೇದ ಮರೆತು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕು. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮತ್ತು ಹೊಸ ಚೈತನ್ಯ ಮೂಡಬೇಕು ಎಂಬ ಆಶಯದಿಂದ ಕಳೆದ ಮೂರು ವರ್ಷಗಳಿಂದ ಟ್ರಸ್ಟ್ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯ ಗಿರಿಜಾ ಕಲ್ಯಾಣೋತ್ಸವವೂ ಅದೇ ಆಶಯದ ಮಹತ್ವದ ಹೆಜ್ಜೆಯಾಗಿದೆ ಎಂದರು.
ಡಿ.11ರಂದು ಶೋಭಾಯಾತ್ರೆ, ಹೊರೆಕಾಣಿಕೆಡಿ.11ರಂದು ಸಂಜೆ 4 ಗಂಟೆಗೆ ಪುತ್ತೂರಿನ ದರ್ಜಿ ವೃತ್ತದಿಂದ ಹೊರೆಕಾಣಿಕೆ ಮೆರವಣಿಗೆ ಹಾಗೂ ಶೋಭಾಯಾತ್ರೆ ಆರಂಭಗೊಂಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ.ಕಳೆದ ಮೂರು ವರ್ಷಗಳಂತೆ ಈ ಬಾರಿಯೂ ಎರಡು ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಅಗತ್ಯವಾದ ಅಕ್ಕಿ, ಧಾನ್ಯ ಹಾಗೂ ಇತರ ಸಾಮಗ್ರಿಗಳನ್ನು ಪುತ್ತೂರಿನ ಮಹಾಜನರು ಗ್ರಾಮ ಗ್ರಾಮಗಳಿಂದ ಸ್ವಯಂಪ್ರೇರಿತರಾಗಿ ನೀಡುತ್ತಿದ್ದಾರೆ. ಇದು ಕೇವಲ ಸಂಘಟನೆಯ ಕಾರ್ಯಕ್ರಮವಲ್ಲ, ಸಮಸ್ತ ಭಕ್ತರ ಧಾರ್ಮಿಕ ಕಾರ್ಯಕ್ರಮ ಎಂಬ ಭಾವನೆಯಿಂದ ಜನರು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಲಕ್ಷ ಬಿಲ್ವಾರ್ಚನೆ, 12 ಸಂತರಿಂದ ಧರ್ಮಸಂದೇಶ
ಡಿ.12ರಂದು ಬೆಳಗ್ಗೆ 6.30ಕ್ಕೆ ಗಣಹೋಮ ಹಾಗೂ ಭಜನಾ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಬೆಳಗ್ಗೆ 10.30ರ ಸುಮಾರಿಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಉಪಸ್ಥಿತಿಯಲ್ಲಿ ಗುರುತಂತ್ರಿಗಳ ನೇತೃತ್ವದಲ್ಲಿ ಲಕ್ಷ ಬಿಲ್ವಾರ್ಚನೆ ನಡೆಯಲಿದೆ. ಬಳಿಕ ಮಹಾಪೂಜೆ, ಕಲಶಾಭಿಷೇಕ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 4.30ರ ಸುಮಾರಿಗೆ ಬೊಳುದಾರಿನಿಂದ ಶಿವ-ಪಾರ್ವತಿಯರ ವಿಗ್ರಹಗಳ ಶೋಭಾಯಾತ್ರೆ ಆಗಮಿಸಲಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯ ರುದ್ರ ಮಂಟಪದಲ್ಲಿ ಕೇಸರಿ ಸಂಗಮದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.ಧಾರ್ಮಿಕ ಸಭೆಯಲ್ಲಿ ಸುಮಾರು 12 ಮಂದಿ ಸಂತರು ಉಪಸ್ಥಿತರಿದ್ದು, ಧರ್ಮಸಂದೇಶ ನೀಡಲಿದ್ದಾರೆ. ಬಳಿಕ ಕೇರಳದ ಖ್ಯಾತ ‘ಸಿಂಧು ಭೈರವಿ’ ಭಜನಾ ತಂಡದಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಲಿದೆ. ಪುತ್ತೂರಿನಲ್ಲಿ ಈ ತಂಡದ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದೆ ಎಂದರು.ಕಾಶಿಯ ಗಂಗಾರತಿ ಮಾದರಿಯಲ್ಲಿ ಶಿವಾರತಿಗಿರಿಜಾ ಕಲ್ಯಾಣೋತ್ಸವದ ಮತ್ತೊಂದು ವಿಶೇಷ ಆಕರ್ಷಣೆ ಶಿವಾರತಿ. ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಗಂಗಾರತಿ ಸೇವೆ ಸಲ್ಲಿಸುವ ವೈದಿಕರ ತಂಡವೇ ಪುತ್ತೂರಿನ ಆರಾಧ್ಯ ದೇವರಾದ ಶ್ರೀ ಮಹಾಲಿಂಗೇಶ್ವರನಿಗೆ ಶಿವಾರತಿ ಸಮರ್ಪಿಸಲಿದೆ.
ಕಾಶಿಯ ಗಂಗಾರತಿಯ ಮಾದರಿಯಲ್ಲಿ ನಡೆಯುವ ಈ ವಿಶಿಷ್ಟ ಆರತಿ ಸೇವೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಆಯೋಜನೆಯಾಗುತ್ತಿದೆ. ಡಿ.12ರಂದು ಬ್ರಹ್ಮರಥ ಬೀದಿಯಲ್ಲಿ ಶಿವಾರತಿ ನಡೆಯಲಿದೆ ಎಂದು ತಿಳಿಸಿದರು.ಡಿ.13ರಂದು ಗಿರಿಜಾ ಕಲ್ಯಾಣೋತ್ಸವ, ಸುಡುಮದ್ದು ಪ್ರದರ್ಶನಡಿ.13ರಂದು ಬೆಳಗ್ಗೆ 5.30ಕ್ಕೆ ಸುಪ್ರಭಾತ ಸೇವೆಯೊಂದಿಗೆ ಎರಡನೇ ದಿನದ ಕಾರ್ಯಕ್ರಮ ಆರಂಭವಾಗಲಿದೆ. ಗಿರಿಜಾ ಕಲ್ಯಾಣಕ್ಕೆ ಪೂರಕವಾದ ವಿವಿಧ ಧಾರ್ಮಿಕ ವಿಧಿವಿಧಾನಗಳು ದಿನವಿಡೀ ನಡೆಯಲಿವೆ. ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ.ಮಧ್ಯಾಹ್ನ 2ರಿಂದ 4.30ರವರೆಗೆ ವಿವಿಧ ಭಜನಾ ಹಾಗೂ ಕುಣಿತ ಭಜನಾ ತಂಡಗಳಿಂದ ಭಜನೋತ್ಸವ ನಡೆಯಲಿದೆ. ಸಂಜೆ 4.30ರ ಬಳಿಕ ಗಿರಿಜಾ ಕಲ್ಯಾಣೋತ್ಸವದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ರಾತ್ರಿ 8.30ರ ಸುಮಾರಿಗೆ ಶಿವಾರತಿ ಹಾಗೂ ಸುಡುಮದ್ದು ಪ್ರದರ್ಶನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.12 ಜೋಡಿಗಳ ಸಾಮೂಹಿಕ ವಿವಾಹಕ್ಕೆ ನೋಂದಣಿಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಳೆದ ವರ್ಷದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭಿಸಲಾಗಿದೆ. ಕಳೆದ ಬಾರಿ 16 ಜೋಡಿಗಳು ಸಾಮೂಹಿಕ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಈ ಬಾರಿಯೂ ಡಿ.13ರಂದು ಬೆಳಗ್ಗೆ 10.30ರಿಂದ 12.30ರೊಳಗಿನ ಶುಭಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಈಗಾಗಲೇ 12 ಜೋಡಿಗಳು ನೋಂದಾಯಿಸಿಕೊಂಡಿದ್ದು, ನ.30ರವರೆಗೆ ನೋಂದಣಿಗೆ ಅವಕಾಶವಿದೆ.ವಿವಾಹಕ್ಕೆ ಬೇಕಾದ ಮಾಂಗಲ್ಯ, ಕಾಲುಂಗುರ, ವಸ್ತ್ರ ಸೇರಿದಂತೆ ವಧು-ವರರಿಗೆ ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನು ಟ್ರಸ್ಟ್ ವತಿಯಿಂದ ಒದಗಿಸಲಾಗುವುದು.
ಪ್ರತಿ ವಿವಾಹಕ್ಕೆ ಅಂದಾಜು ₹1.20 ಲಕ್ಷ ವೆಚ್ಚವಾಗಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ವಿವರಿಸಿದರು.ನ.29ರಂದು ಮಾಹಿತಿ ಕೇಂದ್ರ ಉದ್ಘಾಟನೆಕಾರ್ಯಕ್ರಮದ ಪೂರ್ವಸಿದ್ಧತೆಯ ಭಾಗವಾಗಿ ದೇವಸ್ಥಾನದ ಎದುರು ಕಳೆದ ಮೂರು ವರ್ಷಗಳಿಂದ ಮಾಹಿತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಈ ಬಾರಿಯೂ ನ.29ರಂದು ಮಾಹಿತಿ ಕೇಂದ್ರ ಉದ್ಘಾಟನೆಯಾಗಲಿದೆ.ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಾಲಯ ಉದ್ಘಾಟಿಸಲಿದ್ದಾರೆ. ಅದೇ ದಿನ ಬೆಳಗ್ಗೆ 11.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಾಮೂಹಿಕ ವಿವಾಹದ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಎರಡೂ ಕಡೆಯ ಕುಟುಂಬಸ್ಥರು ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಚಪ್ಪರ ಮುಹೂರ್ತವೂ ನೆರವೇರಲಿದೆ ಎಂದರು.ದ.ಕ. ಜಿಲ್ಲೆಯಲ್ಲಿ ಪ್ರಥಮ ಗಿರಿಜಾ ಕಲ್ಯಾಣೋತ್ಸವಈ ಭಾಗದಲ್ಲಿ ಈವರೆಗೆ ಗಿರಿಜಾ ಕಲ್ಯಾಣೋತ್ಸವ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ಸೀತಾ ಕಲ್ಯಾಣೋತ್ಸವ ನಡೆಸಿದ ಅನುಭವ ಹೊಂದಿರುವ ವೈದಿಕರ ತಂಡವೇ ಗಿರಿಜಾ ಕಲ್ಯಾಣೋತ್ಸವವನ್ನು ನೆರವೇರಿಸಲಿದೆ. ಈ ತಂಡ ಉತ್ಸವ ಮೂರ್ತಿಗಳ ಸಹಿತ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ ಅನುಭವ ಹೊಂದಿದೆ. ಹೀಗಾಗಿ ಪುತ್ತೂರಿನಲ್ಲಿ ನಡೆಯುವ ಈ ಉತ್ಸವ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.ಭಕ್ತರ ಸಹಕಾರದಿಂದ ಯಶಸ್ಸಿನ ನಿರೀಕ್ಷೆವರ್ಷದಿಂದ ವರ್ಷಕ್ಕೆ ಕಾರ್ಯಕ್ರಮದ ವ್ಯಾಪ್ತಿ ವಿಸ್ತಾರವಾಗುತ್ತಿರುವುದರಿಂದ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಈ ಬಾರಿ ದೇವಸ್ಥಾನದ ಅಭಿವೃದ್ಧಿಯ ದೃಷ್ಟಿಯಿಂದ ನಟರಾಜ ವೇದಿಕೆಯ ತೆರವು ಕಾರ್ಯ ನಡೆದಿರುವುದರಿಂದ, ಈ ಹಿಂದೆ ಅಡುಗೆ ತಯಾರಿಗೆ ಬಳಸುತ್ತಿದ್ದ ಸ್ಥಳದಲ್ಲಿ ಪ್ರತ್ಯೇಕ ಶೀಟ್ ಅಳವಡಿಸಬೇಕಾಗಿದೆ. ಇದರಿಂದ ಹೆಚ್ಚುವರಿ ವೆಚ್ಚ ಉಂಟಾಗಲಿದೆ.ಆದರೂ ಭಕ್ತರ ಸಹಕಾರ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗಿರಿಜಾ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಮೋನಪ್ಪ ಪುರುಷ ಮುಗೇರಡ್ಕ, ಅಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ, ಕಾರ್ಯಾಧ್ಯಕ್ಷ ಅನಿಲ್ ಕುಮಾರ್ ಕಣ್ಣಾರ್ನೂಜಿ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ತೆಂಕಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಸೀತಾ ಪರಿವಾರ ಅಧ್ಯಕ್ಷೆ ಪ್ರೇಮಾ ರೈ ಉಪಸ್ಥಿತರಿದ್ದರು. ಆಮಂತ್ರಣ ಸಮಿತಿ ಸಂಚಾಲಕ ರವಿ ಕುಮಾರ್ ರೈ ಕೆದಂಬಾಡಿಮಠ ಸ್ವಾಗತಿಸಿದರು.









