ವಿಟ್ಲ: ಅಜೇಯ ಟ್ರಸ್ಟ್ ವತಿಯಿಂದ ಬಂಟ್ವಾಳ ತಾಲೂಕಿನ ಕೊಡಂಗಾಯಿ ಮೂರುಕಡೆಯಲ್ಲಿ ನಿರ್ಮಾಣಗೊಳ್ಳಲಿರುವ ಮೈತ್ರೇಯಿ ಆಯುರ್ವೇದ ಗುರುಕುಲಂ ಹಾಗೂ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡಕ್ಕೆ ನ.25ರಂದು ಶಿಲಾನ್ಯಾಸ ನೆರವೇರಲಿದೆ. ಇದೇ ಸಂದರ್ಭದಲ್ಲಿ ಈಗಾಗಲೇ ಸಿದ್ಧಗೊಂಡಿರುವ 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭವೂ ನಡೆಯಲಿದೆ ಎಂದು ಮೈತ್ರೇಯಿ ಆಯುರ್ವೇದ ಗುರುಕುಲಂ ಆಡಳಿತ ಮಂಡಳಿ ಅಧ್ಯಕ್ಷೆ ಡಾ. ಸುಧಾ ಎಸ್. ರಾವ್ ತಿಳಿಸಿದರು.
ಮೈತ್ರೇಯಿ ಗುರುಕುಲದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1994ರಲ್ಲಿ ಸ್ಥಾಪನೆಯಾದ ಮೈತ್ರೇಯಿ ಗುರುಕುಲಂನ ಸುದೀರ್ಘ ಸೇವಾ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಅಜೇಯ ಟ್ರಸ್ಟ್ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದೆ. ಹೆಣ್ಣುಮಕ್ಕಳಿಗೆ ಮೌಲ್ಯಾಧಾರಿತ ವಸತಿ ಸಹಿತ ಶಿಕ್ಷಣ ನೀಡುತ್ತಾ ಬಂದಿರುವ ಸಂಸ್ಥೆ ಇದೀಗ ಆಯುರ್ವೇದ ಶಿಕ್ಷಣ ಕ್ಷೇತ್ರಕ್ಕೂ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ ಎಂದರು.
ಸಂಸ್ಕೃತ, ಯೋಗ, ಭಾರತೀಯ ಜ್ಞಾನಪರಂಪರೆ, ಶಿಸ್ತು ಮತ್ತು ನೈತಿಕ ಮೌಲ್ಯಗಳೊಂದಿಗೆ ಆಯುರ್ವೇದ ಶಿಕ್ಷಣವನ್ನು ಸಂಯೋಜಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಆಯುರ್ವೇದದ ಶಾಸ್ತ್ರೀಯ ಗ್ರಂಥಗಳನ್ನು ಸಂಸ್ಕೃತದಲ್ಲಿ ಅಧ್ಯಯನ ಮಾಡಲು ವಿಶೇಷ ಒತ್ತು ನೀಡಲಾಗುತ್ತಿದ್ದು, ಜ್ಞಾನವಂತ, ಕೌಶಲ್ಯಪೂರ್ಣ ಹಾಗೂ ಕರುಣಾಮಯಿ ಆಯುರ್ವೇದ ವೈದ್ಯರನ್ನು ರೂಪಿಸುವ ಆಶಯ ಹೊಂದಲಾಗಿದೆ. ಆಯುರ್ವೇದದ ಸನಾತನ ಜ್ಞಾನವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದರ ಜತೆಗೆ ಜನಸಾಮಾನ್ಯರಿಗೆ ಗುಣಮಟ್ಟದ ಆಯುರ್ವೇದ ಆರೋಗ್ಯ ಸೇವೆ ಒದಗಿಸುವ ಗುರಿಯನ್ನೂ ಸಂಸ್ಥೆ ಹೊಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಬೆಂಗಳೂರಿನ ಸೆಂಚುರಿ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಡಾ. ಪಿ. ದಯಾನಂದ ಪೈ, ಮಂಗಳೂರು ಗಣೇಶ್ ಬೀಡಿ ವರ್ಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಜಗನ್ನಾಥ ಶೆಣೈ, ಬರೋಡಾದ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಶೆಟ್ಟಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಅಹಲ್ಯಾ ಹಾಗೂ ಸಂಸ್ಕೃತ ಭಾರತಿ ಸಂಘಟನೆಯ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ದಿನೇಶ್ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಜೇಯ ಟ್ರಸ್ಟ್ ಅಧ್ಯಕ್ಷ ಸುಬ್ರಾಯ ಪೈ ಹಾಗೂ ಮೈತ್ರೇಯಿ ಆಯುರ್ವೇದ ಗುರುಕುಲಂ ಪ್ರಾಂಶುಪಾಲ ಡಾ. ರವಿಗಣೇಶ್ ಮೊಗ್ರ ಉಪಸ್ಥಿತರಿದ್ದರು.









