ದೆಹಲಿ: ಕೆಫೆಯಲ್ಲಿ ಪಾರ್ಟಿ ಮುಗಿಸಿ ಹೊರಬಂದ ಬಳಿಕ 22 ವರ್ಷದ ಯುವತಿಯ ಮೇಲೆ ಇಬ್ಬರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ದೆಹಲಿಯ ಪ್ರೀತ್ ವಿಹಾರ್ ಪ್ರದೇಶದಲ್ಲಿ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಮೂವರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.
ಪೊಲೀಸರ ಪ್ರಕಾರ, ಸಂತ್ರಸ್ತೆ ಹಾಗೂ ಆರೋಪಿಗಳು ಕರ್ಕಾರ್ಡೂಮಾದ ಕ್ರಾಸ್ ರಿವರ್ ಮಾಲ್‌ನಲ್ಲಿರುವ ಕೆಫೆ 8ರಲ್ಲಿ ಸಹೋದ್ಯೋಗಿಗಳಾಗಿದ್ದರು. ಸೋಮವಾರ ರಾತ್ರಿ ಯುವತಿ ಸೇರಿದಂತೆ ಎಂಟು ಮಂದಿ ಪ್ರೀತ್ ವಿಹಾರ್‌ನ ಸಾಲ್ಟನೇಟ್ ಕೆಫೆಯಲ್ಲಿ ಪಾರ್ಟಿಗಾಗಿ ಸೇರಿದ್ದರು.
ಕೆಫೆ ರಾತ್ರಿ 11.30ಕ್ಕೆ ಮುಚ್ಚಬೇಕಿದ್ದರೂ, ಸಿಬ್ಬಂದಿಯೊಬ್ಬರ ಬಳಿ ಕೀ ಇದ್ದ ಕಾರಣ ಪಾರ್ಟಿ ಮುಂದುವರಿಸಲು ಕೆಫೆಯನ್ನು ಮತ್ತೆ ತೆರೆಯಲಾಗಿತ್ತು ಎನ್ನಲಾಗಿದೆ. ಮಂಗಳವಾರ ಬೆಳಗಿನ ಜಾವ ಸುಮಾರು 3.30ಕ್ಕೆ ಗುಂಪು ಕೆಫೆಯಿಂದ ಹೊರಬಂದ ಬಳಿಕ ಇಬ್ಬರು ಪುರುಷರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇತರ ಸಹೋದ್ಯೋಗಿಗಳು ಆರೋಪಿಗಳಿಗೆ ನೆರವಾಗಿದ್ದಾರೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಮೂವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಘಟನೆ ನಡೆದ ತಕ್ಷಣ ಯುವತಿ ಪೊಲೀಸರನ್ನು ಸಂಪರ್ಕಿಸಿರಲಿಲ್ಲ ಎಂದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯುವತಿ ಪುರುಷ ಸ್ನೇಹಿತ ಹಾಗೂ ಇಬ್ಬರು ಮಹಿಳೆಯರೊಂದಿಗೆ ವಾಹನದಲ್ಲಿ ತೆರಳುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಮಂಗಳವಾರ ಬೆಳಗ್ಗೆ 5.45ರ ಸುಮಾರಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳುತ್ತಿದ್ದು, ಮ್ಯಾಜಿಸ್ಟ್ರೇಟ್ ಮುಂದೆಯೂ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!