ಪುತ್ತೂರು: ಪಡೂರು ಗ್ರಾಮದ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ಕುಂಟಾರು ರವೀಶ ತಂತ್ರಿ ಹಾಗೂ ಕೆಮ್ಮಿಂಜೆಯ ಲಕ್ಷ್ಮೀಶ ತಂತ್ರಿ ಅವರ ನೇತೃತ್ವದಲ್ಲಿ ಪಂಚಮುಖಿ ಆಂಜನೇಯ ಯಾಗ ಹಾಗೂ ವೀರಾಂಜನೇಯ ಸ್ವಾಮಿಗೆ ಅಭಿಷೇಕದ ಅಂಗವಾಗಿ ‘ಕಲಶಸಂಗಮ’ ನಡೆಯಲಿದೆ ಎಂದು ಯಾಗ ಸಮಿತಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ತಿಳಿಸಿದರು.ಕ್ಷೇತ್ರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.26ರಂದು ಸಂಜೆ 4 ಗಂಟೆಗೆ ಪುತ್ತೂರಿನ ದರ್ಬೆ ವೃತ್ತದಿಂದ ಹಸಿರು ಹೊರೆಕಾಣಿಕೆಯೊಂದಿಗೆ ಕಲಶಸಂಗಮ ಮೆರವಣಿಗೆ ನಡೆಯಲಿದೆ. ಬಳಿಕ ಉಗ್ರಾಣ ಮುಹೂರ್ತ ನೆರವೇರಲಿದ್ದು, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದರು.
ನ.29ರಂದು ಬೆಳಿಗ್ಗೆ 7ರಿಂದ ಪಂಚಮುಖಿ ಆಂಜನೇಯ ಯಾಗ ಆರಂಭವಾಗಲಿದ್ದು, 9 ಗಂಟೆಗೆ ಸಾಮೂಹಿಕ ಹನುಮಾನ್ ಚಾಲೀಸ ಪಠಣ ನಡೆಯಲಿದೆ. ಬಳಿಕ ಪಾವಗಡ ಪ್ರಕಾಶ್ ರಾವ್ ಅವರ ರಾಮಾಯಣ ಪ್ರವಚನದ ಕೊನೆಯ ಭಾಗ ನಡೆಯಲಿದ್ದು, ಬೆಳಿಗ್ಗೆ 11.30ಕ್ಕೆ ಯಾಗದ ಪೂರ್ಣಾಹುತಿ ನೆರವೇರಲಿದೆ. ನಾಲ್ಕೂ ದಿನ ಬೆಳಿಗ್ಗೆ ಮತ್ತು ಸಂಜೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಸಾಂಸ್ಕೃತಿಕ ಕಾರ್ಯಕ್ರಮಗಳುನ.26ರಂದು ಸಂಜೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸತೀಶ್ ಶೆಟ್ಟಿ ಪಟ್ಲ ಅವರ ಸಾರಥ್ಯದಲ್ಲಿ ಪೌರಾಣಿಕ ಯಕ್ಷಗಾನ ನಡೆಯಲಿದೆ. ನ.27ರಂದು ರಾತ್ರಿ 8ಕ್ಕೆ ವಿಧಾತ್ರಿ ಕಲಾವಿದೆರ್ ಕುಡ್ಲ ತಂಡದಿಂದ ‘ಜೈ ಹನುಮಾನ್’ ಸಿನಿನಾಟಕ ಪ್ರದರ್ಶನಗೊಳ್ಳಲಿದೆ. ನ.28ರಂದು ಸಂಜೆ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಹಾಗೂ ರಾತ್ರಿ 8ರಿಂದ ಪುತ್ತೂರಿನ ಜಗದೀಶ್ ಆಚಾರ್ಯ ಮತ್ತು ಬಳಗದಿಂದ ‘ಭಕ್ತಿಭಾವ ಸಂಗಮ-ಸಂಗೀತ ಗಾನ ಸಂಭ್ರಮ’ ನಡೆಯಲಿದೆ. ಪಾವಗಡ ಪ್ರಕಾಶ್ ರಾವ್ ಅವರು ನ.27 ಮತ್ತು 28ರಂದು ಸಂಜೆ ಹಾಗೂ ನ.29ರಂದು ಬೆಳಿಗ್ಗೆ ರಾಮಾಯಣ ಪ್ರವಚನ ನೀಡಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಯಾಗ ಸಮಿತಿ ಸಂಚಾಲಕ ಜೀವಂಧರ್ ಜೈನ್, ಪ್ರಧಾನ ಕಾರ್ಯದರ್ಶಿ ಮುರಳೀಕೃಷ್ಣ ಹಸಂತಡ್ಕ, ಉಪಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಕಲಶ ತೀರ್ಥ ಸಮಿತಿ ಸಂಚಾಲಕ ಜಯಂತ ಶೆಟ್ಟಿ ಕಂಬಳತ್ತಡ್ಡ, ಭಜನಾ ಸಮಿತಿ ಸಂಚಾಲಕ ರವಿಕುಮಾರ್ ಕೈತ್ತಡ್ಕ, ಸಮಿತಿ ಪ್ರಮುಖರಾದ ದಯಾನಂದ ಶೆಟ್ಟಿ ಉಜಿರೆಮಾರ್ ಹಾಗೂ ರಾಧಾಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು.









