ಪುತ್ತೂರು, ನ. 26: ದೇವಸ್ಥಾನದಲ್ಲಿ ಇಲಾಖೆಯ ಅನುಮತಿ ಪಡೆಯದೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆಯವರೆಗೆ ಕಾಮಗಾರಿಗಳಿಗೆ ಮಧ್ಯಂತರ ತಡೆ ನೀಡಿದೆ ಎಂದು ನ್ಯಾಯವಾದಿ ವಿರೂಪಾಕ್ಷ ಮಚ್ಚಿಮಲೆ ತಿಳಿಸಿದ್ದಾರೆ.ಗುರುವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ದೇವಸ್ಥಾನದ ಆಡಳಿತ ಸಮಿತಿಯು ಅಗತ್ಯ ಇಲಾಖಾ ಅನುಮತಿಗಳನ್ನು ಪಡೆದುಕೊಳ್ಳದೆ, ಇಲಾಖೆ ಹಾಗೂ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಕೆಲವು ಕಾಮಗಾರಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು.ದೇವಸ್ಥಾನದ ಆಡಳಿತದಲ್ಲಿ ಹಣಕಾಸಿನ ದುರುಪಯೋಗ ಹಾಗೂ ಲೆಕ್ಕಪತ್ರಗಳಲ್ಲಿನ ಲೋಪದೋಷಗಳ ಕುರಿತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಈ ಸಂಬಂಧ ಇಲಾಖೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.ಇಲಾಖಾ ನಿಯಮಗಳು ಮತ್ತು ಕಾನೂನಿಗೆ ವಿರುದ್ಧವಾಗಿ ಕಾಮಗಾರಿಗಳನ್ನು ನಡೆಸದಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಸರಕಾರಕ್ಕೆ ನಿರ್ದೇಶನ ನೀಡಲಾಗಿದೆ. ದೇವಸ್ಥಾನದಲ್ಲಿ ನಿಯಮಗಳನ್ನು ಮೀರಿ ನಡೆಸಲಾಗುತ್ತಿರುವ ಕಾಮಗಾರಿಗಳು ಮತ್ತು ಕಾರ್ಯನಿರ್ವಹಣಾಧಿಕಾರಿಗಳ ಅಧಿಕಾರ ಲೋಪವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಿರೂಪಾಕ್ಷ ಮಚ್ಚಿಮಲೆ ಹೇಳಿದರು.









