ಪುತ್ತೂರು: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅರಿವಿನ ಕೊರತೆಯಿಂದ ಯಾವುದೇ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಆರ್ಯಾಪು ಸಹಕಾರಿ ಸಂಘದಲ್ಲಿ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ತಿಳಿಸಿದರು.ಆರ್ಯಾಪು ಸಹಕಾರಿ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರು ಯಾವುದೇ ಪಕ್ಷಕ್ಕೆ ಮತ ಚಲಾಯಿಸುವುದು ಅವರ ವೈಯಕ್ತಿಕ ಹಕ್ಕು. ಆದರೆ ಯಾರೊಬ್ಬರ ಮತದಾನದ ಹಕ್ಕೂ ಕಸಿಯಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ SIR ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ಚುನಾವಣಾ ಆಯೋಗ ಈಗಾಗಲೇ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಿದ್ದರೂ, ಜನರು SIR ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಭವಿಷ್ಯದಲ್ಲಿ ವಿದ್ಯಾರ್ಥಿವೇತನ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಿಂಚಣಿ ಸೇರಿದಂತೆ ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯುವ ಸಂದರ್ಭದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.ಕಾರ್ಯಾಗಾರವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದ SIR ತರಬೇತುದಾರೆ ಅಮಿತಾ ಅಶ್ವಿನ್ ಉಳ್ಳಾಲ್ ಅವರು SIR ಪ್ರಕ್ರಿಯೆ, ನಮೂನೆ ಭರ್ತಿ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ರೈ, ನಿರ್ದೇಶಕರಾದ ಸದಾನಂದ ಶೆಟ್ಟಿ ಕೊರೆಲು, ಇಸ್ಮಾಯಿಲ್ ಮಲಾರ್, ಗಣೇಶ್ ರೈ ಕುರಿಯ, ಸಂಶುದ್ದೀನ್ ನೀರ್ಕಜೆ, ತೆರೆಜ ಸಿಕ್ವೇರಾ, ಶಾಖಾ ವ್ಯವಸ್ಥಾಪಕಿ ಶುಭಾಶಿನಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಮಿತಾ ಅಶ್ವಿನ್ ಉಳ್ಳಾಲ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಸಿಬ್ಬಂದಿ ಉಮೇಶ್ ಎಸ್.ಕೆ. ನಿರೂಪಿಸಿದರು.ಸಂಘದ ಸಂಪ್ಯ ಕೇಂದ್ರ ಕಚೇರಿ, ಕುರಿಯ ಶಾಖೆ ಹಾಗೂ ಕೂರ್ನಡ್ಕದಲ್ಲಿ SIR ಸಹಾಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ಎನುಮರೇಷನ್ ಫಾರಂ ಭರ್ತಿ ಮಾಡಲು ಸಿಬ್ಬಂದಿ ನೆರವು ನೀಡಲಿದ್ದಾರೆ ಎಂದು ಎಚ್. ಮಹಮ್ಮದ್ ಅಲಿ ತಿಳಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!