ಪುತ್ತೂರು: ಕಬಕ ಸಮೀಪದ ಪೋಳ್ಯದಲ್ಲಿರುವ ಇನ್‌ಸ್ಪಿರೇಷನ್ ಪಿಯು ಕಾಲೇಜಿನ ಪ್ರಾರಂಭೋತ್ಸವ, ಎಸ್‌ವಿಜಿ ಸೆಂಟರ್ ಆಫ್ ಎಕ್ಸಲೆನ್ಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗಳ ವಾರ್ಷಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ‘ಪರಂಪರೆ-2026’ ಆ.22ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ರಾಜೇಶ್ವರಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ‘ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ದೊರೆತಿದ್ದು, ಅವುಗಳಲ್ಲಿ ಇನ್‌ಸ್ಪಿರೇಷನ್ ಸಂಸ್ಥೆಯೂ ಒಂದಾಗಿದೆ. ಮೈಸೂರಿನಿಂದ ಬಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲೇಜು ಆರಂಭಿಸಿರುವ ಎಸ್‌ವಿಜಿ ಗ್ರೂಪ್‌ಗೆ ಅಭಿನಂದನೆಗಳು. ವಸತಿ ವ್ಯವಸ್ಥೆಯೂ ಇರುವುದರಿಂದ ಸಂಸ್ಥೆಯ ಜವಾಬ್ದಾರಿ ಹೆಚ್ಚಿದೆ. ಜಿಲ್ಲೆಯ ಇತರ ಕಾಲೇಜುಗಳಂತೆ ಈ ಸಂಸ್ಥೆಯೂ ಉತ್ತಮವಾಗಿ ಅಭಿವೃದ್ಧಿ ಹೊಂದಲಿ’ ಎಂದು ಆಶಿಸಿದರು.ಸಂಸ್ಥೆಯ ಸಂಸ್ಥಾಪಕ ವಿಶ್ವನಾಥ್ ಶೇಷಾಚಲ ದಿಕ್ಸೂಚಿ ಭಾಷಣ ಮಾಡಿದರು. ‘ಪ್ರತಿವರ್ಷ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಬಾರಿ ಪುತ್ತೂರಿನಲ್ಲಿ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದೇ ಕಾರಣಕ್ಕೆ ಇಲ್ಲಿ ಕಾಲೇಜು ಆರಂಭಿಸಲಾಗಿದೆ. ಇನ್‌ಸ್ಪಿರೇಷನ್ ಸಂಸ್ಥೆ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ವಿದ್ಯಾರ್ಥಿಗಳನ್ನು ಅನ್ವೇಷಣೆ ಮತ್ತು ಸಂಶೋಧನೆಯತ್ತ ಆಕರ್ಷಿಸುವ ಉದ್ದೇಶದಿಂದ ಕಾಲೇಜಿಗೆ ‘ಇನ್‌ಸ್ಪಿರೇಷನ್’ ಎಂಬ ಹೆಸರಿಡಲಾಗಿದೆ’ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಉತ್ತಮ ಸಾಧನೆ ಮಾಡಿದ ಉಪನ್ಯಾಸಕರಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳೇ ಮತದಾನದ ಮೂಲಕ ಪ್ರಶಸ್ತಿಗೆ ಅರ್ಹ ಉಪನ್ಯಾಸಕರನ್ನು ಆಯ್ಕೆ ಮಾಡಿರುವುದು ವಿಶೇಷವಾಗಿತ್ತು. ಉತ್ತಮ ಕೇರ್‌ಟೇಕರ್, ಸ್ನೇಹಪರ ಉಪನ್ಯಾಸಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ಸನ್ಮಾನಿಸಿ, ಇನ್‌ಸ್ಪಿರೇಷನ್ ಪಿಯು ಕಾಲೇಜಿಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ತುಳುನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೃತ್ಯ ವೈಭವ, ಫೀಲ್ಡ್ ಡ್ಯಾನ್ಸ್, ಉಪನ್ಯಾಸಕರ ನೃತ್ಯ, ಭರತನಾಟ್ಯ ಸೇರಿದಂತೆ ಹಲವು ಕಾರ್ಯಕ್ರಮಗಳು ಗಮನ ಸೆಳೆದವು. ಕೊನೆಯಲ್ಲಿ ‘ಕದಂಬ ಕೌಶಿಕೆ’ ಯಕ್ಷಗಾನ ಬಯಲಾಟ ನಡೆಯಿತು.ಎಸ್‌ವಿಜಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಕಾರ್ಯದರ್ಶಿ ಶ್ರುತಿ ಶಿವಣ್ಣ ವಿಶ್ವನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಸಹಾಯಕ ನಿರ್ದೇಶಕ ಆನಂದ್, ಸಾಂದೀಪನಿ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಜಯರಾಮ ಕೆದಿಲಾಯ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಡಾ. ರವೀಂದ್ರನಾಥ್ ಐತಾಳ್, ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಸೂರ್ಯನಾರಾಯಣ ಕೆ. ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.ಇನ್‌ಸ್ಪಿರೇಷನ್ ಪಿಯು ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಗುರುರಾಜ್, ಪ್ರಾಂಶುಪಾಲೆ ವರ್ಷಾ ಎಸ್.ಆರ್., ಟ್ರಸ್ಟಿ ಶಶಿಕಿರಣ್, ಉಪನ್ಯಾಸಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಎಸ್‌ವಿಜಿ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.












