ಮುಂಬಯಿ: ಕನ್ನಡದ ಹೆಸರಾಂತ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಸ್ಮರಣಾರ್ಥ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ನೀಡುವ 2026ನೇ ಸಾಲಿನ ವ್ಯಾಸರಾಯ ಬಲ್ಲಾಳ ಪ್ರಶಸ್ತಿಗೆ ಖ್ಯಾತ ಪತ್ರಕರ್ತ ಹಾಗೂ ಕರ್ನಾಟಕ ಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ ಮೊದಲ ವಾರದಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.ಅ. 19ರಂದು ಮುಂಬಯಿ ವಿಶ್ವವಿದ್ಯಾಲಯದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಪ್ರತಿಷ್ಠಾನದ ಸಂಚಾಲಕಿ ಕುಸುಮ ಬಲ್ಲಾಳ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ಹಾಗೂ ಆಯ್ಕೆ ಸಮಿತಿ ಸದಸ್ಯೆ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಪಾಲೆತ್ತಾಡಿ ಅವರ ದೀರ್ಘಕಾಲದ ಪತ್ರಿಕೋದ್ಯಮದ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.ವ್ಯಾಸರಾಯ ಬಲ್ಲಾಳ ಅವರು ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಿದ ಬಳಿಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ನುಡಿ ಪತ್ರಿಕೆಯ ಬೆಳವಣಿಗೆಯಲ್ಲಿಯೂ ಅವರ ಪಾತ್ರ ಮಹತ್ವದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ನೀಡಲು ಆಯ್ಕೆ ಸಮಿತಿ ನಿರ್ಧರಿಸಿತು.ಮೂರು ದಶಕಗಳಿಗೂ ಮೀರಿದ ಪತ್ರಿಕೋದ್ಯಮ ಸೇವೆಮುಂಬಯಿ ಕನ್ನಡ ಪತ್ರಿಕೋದ್ಯಮದಲ್ಲಿ ಚಂದ್ರಶೇಖರ ಪಾಲೆತ್ತಾಡಿ ಅವರು ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕ ಮಲ್ಲ ದೈನಿಕದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಮುಂಬಯಿಯಲ್ಲಿ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಚೈತನ್ಯ ನೀಡಿದವರಲ್ಲಿ ಪ್ರಮುಖರು.ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರವು ಮೊಹರೆ ಹನುಮಂತರಾಯ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಗೌರವ ನೀಡಿ ಸನ್ಮಾನಿಸಿದೆ. ಅವರ ಸಾಧನೆಗಳನ್ನು ದಾಖಲಿಸುವ ಆಪ್ತ ಮಿತ್ರ ಗೌರವ ಗ್ರಂಥವೂ ಪ್ರಕಟವಾಗಿದೆ.ಪಾಲೆತ್ತಾಡಿ ಅವರ ನಿರಂತರ ಪರಿಶ್ರಮ ಮತ್ತು ಬದ್ಧತೆಯಿಂದ ಕರ್ನಾಟಕ ಮಲ್ಲ ಪತ್ರಿಕೆ ಮುಂಬಯಿ ಮಹಾನಗರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಯುತ್ತಿದೆ. ಪತ್ರಿಕೆಯಲ್ಲಿ ಅವರು ಬರೆದ ಸಂಪಾದಕೀಯಗಳು ಹಾಗೂ ಅಂಕಣ ಬರಹಗಳ ಸಂಖ್ಯೆ ಹತ್ತು ಸಾವಿರವನ್ನು ಮೀರಿರುವುದು ಅವರ ಬರವಣಿಗೆಯ ನಿರಂತರತೆಗೆ ಸಾಕ್ಷಿಯಾಗಿದೆ.ಮುಂಬಯಿಯ ತುಳು-ಕನ್ನಡಿಗರ ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿರುವ ಪಾಲೆತ್ತಾಡಿ ಅವರು ನೇರ ನಡೆ-ನುಡಿಗೆ ಹೆಸರಾದ ವ್ಯಕ್ತಿತ್ವವಾಗಿದ್ದು, ಅವರ ಪತ್ರಿಕೋದ್ಯಮದ ಸಾಧನೆಗೆ ಸಂದಿರುವ ಈ ಪ್ರಶಸ್ತಿ ಕನ್ನಡ ಪತ್ರಿಕಾ ಕ್ಷೇತ್ರದ ಮಹತ್ವದ ಗೌರವವೆಂದು ಪರಿಗಣಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!