ಕರ್ನಾಟಕದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಸೇವೆ ಆರಂಭವಾಗಲಿದೆ. ಮಂಗಳೂರಿನಿಂದ ಮೂರು ಮಾರ್ಗದಲ್ಲಿ ಹೊಸ ವಿಮಾನ ಸೇವೆಯನ್ನು ಆರಂಭಿಸುವ ಕುರಿತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ಘೋಷಣೆ ಮಾಡಿದೆ, ವೇಳಾಪಟ್ಟಿಯನ್ನು ಸಹ ಘೋಷಣೆ ಮಾಡಿದೆ.

ಇದರಿಂದಾಗಿ ಕರಾವಳಿ ಭಾಗದ ಜನರಿಗೆ ಅನುಕೂಲವಾಗಲಿದೆ.

ಮಂಗಳೂರು-ಸಿಂಗಾಪುರ ನೇರ ವಿಮಾನ ಸೇವೆ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಮಾಹಿತಿ ನೀಡಿದ್ದಾರೆ. ಈ ಕುರಿತು ಅವರು ಫೇಸ್‌ಬುಕ್ ಪೋಸ್ಟ್‌ ಹಾಕಿದ್ದಾರೆ. ‘ನಮ್ಮ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಸೇವೆ. ಹೊಸ ವರ್ಷದಲ್ಲಿ ನಮ್ಮ ಮಂಗಳೂರಿನಿಂದ ಸಿಂಗಪುರಕ್ಕೆ ನೇರವಾಗಿ ಎರಡು ವಿಮಾನಗಳು ಸಂಚರಿಸಲಿವೆ ಎಂಬ ಸಂತಸದ ಸುದ್ದಿ ನಮಗೆ ದೊರೆತಿದೆ. ಈ ಸೇವೆಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಒದಗಿಸಲಿದೆ. ಇದರ ಜೊತೆಗೆ, ಪುಣೆ ಮತ್ತು ದೆಹಲಿಗೂ ಕೂಡ ಎರಡು ಹೊಸ ನೇರ ವಿಮಾನ ಸೇವೆಗಳು ಆರಂಭವಾಗಲಿವೆ’ ಎಂದು ಹೇಳಿದ್ದಾರೆ.

ಮಂಗಳೂರಿನಿಂದ ಸಿಂಗಾಪುರದ ಚಾಂಗಿಗೆ ನೇರ ವಿಮಾನ ಸಂಪರ್ಕ ಕಲ್ಪಿಸುವಂತೆ ಬೇಡಿಕೆ, ಒತ್ತಾಯ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ, ಗೌರವಾನ್ವಿತ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಈ ಬಗ್ಗೆ ಮನವಿ ಸಲ್ಲಿಸಿದ್ದೆ. ಇದೀಗ ಈ ಪ್ರಯತ್ನದ ಫಲವಾಗಿ ಮಂಗಳೂರು-ಸಿಂಗಾಪುರದ ನಡುವೆ ನೇರ ವಿಮಾನ ಸೇವೆ ಆರಂಭವಾಗುತ್ತಿರುವುದು ಸಂತಸ ತಂದಿದೆ’ ಎಂದು ಸಂಸದರು ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದ ಇನ್ನಷ್ಟು ವಿಮಾನ ಸಂಸ್ಥೆಗಳಿಗೆ ಈ ಮಾರ್ಗದಲ್ಲಿ ಸೇವೆ ನೀಡುವಂತೆ ಪ್ರೇರೇಪಿಸಲಿದೆ ಜೊತೆಗೆ ವ್ಯಾಪಾರ, ವ್ಯವಹಾರ ದೃಷ್ಟಿಯಿಂದಲೂ ಅನುಕೂಲವಾಗಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ‘ಆಕ್ಟ್ ಈಸ್ಟ್ ಪಾಲಿಸಿ’ ಅನುಗುಣವಾಗಿ ಭಾರತವನ್ನು ಏಷ್ಯಾ-ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಸಂಪರ್ಕಿಸುವ ಈ ಯೋಜನೆ ಮಹತ್ವದ್ದಾಗಿದೆ. ಈ ಸಂದರ್ಭದಲ್ಲಿ, ಸಿಂಗಾಪುರದಲ್ಲಿ ನೆಲೆಸಿರುವ ಕರಾವಳಿಗರನ್ನು #BackToOoru ಅಭಿಯಾನದಡಿ ಮಂಗಳೂರಿನಲ್ಲಿ ಹೂಡಿಕೆ ಮಾಡುವತ್ತ ಯೋಚಿಸುವಂತೆ ನಾನು ಭಿನ್ನವಿಸಿಕೊಳ್ಳುತ್ತೇವೆ’ ಎಂದು ಮನವಿ ಮಾಡಿದ್ದಾರೆ.

ಏರ್‌ಇಂಡಿಯಾ ಎಕ್ಸ್‌ಪ್ರೆಸ್ 2025ರ ಜನವರಿಯಲ್ಲಿ ಮಂಗಳೂರು-ಸಿಂಗಾಪುರ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. ಇದಕ್ಕಾಗಿ ಈ ಟಿಕೆಟ್ ಬುಕ್ಕಿಂಗ್ ಸಹ ಪ್ರಾರಂಭಿಸಿದೆ. ಉಭಯ ನಗರಗಳ ನಡುವಿನ ಸಂಚಾರಕ್ಕೆ ಸುಮಾರು 5 ತಾಸು ಆಗಲಿದೆ. ಸದ್ಯದ ಮಾಹಿತಿಯಂತೆ ಪ್ರಯಾಣ ದರ 13,520 ರೂ., 14,044 ರೂ. ಮತ್ತು 14,990 ರೂ.ಗಳು. ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವೆಬ್‌ಸೈಟ್‌ಗೆ ಭೇಟಿ ನೀಡಿ.

ಪುಣೆ, ದೆಹಲಿ ವಿಮಾನ ಸೇವೆ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರತಿ ಶನಿವಾರ ಮಂಗಳೂರಿನಿಂದ ದೆಹಲಿ ಮತ್ತು ಪುಣೆಗೆ ವಿಮಾನ ಸೇವೆಯನ್ನು ಆರಂಭಿಸಲಿದೆ. ಈ ಕುರಿತು ಈಗಾಗಲೇ ಘೋಷಣೆ ಮಾಡಿದೆ.

IX 2256 ಸಂಖ್ಯೆಯ ವಿಮಾನ ಮಂಗಳೂರು-ಪುಣೆ ನಡುವೆ ಸಂಚಾರ ನಡೆಸಲಿದೆ. ಮಂಗಳೂರಿನಿಂದ 8 ಗಂಟೆಗೆ ಹೊರಟು, 9.25ಕ್ಕೆ ಪುಣೆಯನ್ನು ತಲುಪಲಿದೆ.

IX 2257 ಸಂಖ್ಯೆಯ ವಿಮಾನ ಪುಣೆ-ಮಂಗಳೂರು ನಡುವೆ ಸಂಚಾರ ನಡೆಸಲಿದೆ. ಪುಣೆಯಿಂದ 9.55ಕ್ಕೆ ಹೊರಟು ಮಂಗಳೂರಿಗೆ 11.40ಕ್ಕೆ ಆಗಮಿಸಲಿದೆ.

IX 2236 ಸಂಖ್ಯೆಯ ವಿಮಾನ ಮಂಗಳೂರು-ಪುಣೆ ನಡುವೆ ಸಂಚಾರ ನಡೆಸಲಿದೆ. ಮಂಗಳೂರಿನಿಂದ 18.30 ಗಂಟೆಗೆ ಹೊರಟು, 20ಕ್ಕೆ ಪುಣೆಯನ್ನು ತಲುಪಲಿದೆ.

IX 2237 ಸಂಖ್ಯೆಯ ವಿಮಾನ ಪುಣೆ-ಮಂಗಳೂರು ನಡುವೆ ಸಂಚಾರ ನಡೆಸಲಿದೆ. ಪುಣೆಯಿಂದ 20.35ಕ್ಕೆ ಹೊರಟು, ಮಂಗಳೂರಿಗೆ 22.05ಕ್ಕೆ ಆಗಮಿಸಲಿದೆ.

IX 1552 ಸಂಖ್ಯೆಯ ವಿಮಾನ ಮಂಗಳೂರು-ದೆಹಲಿ ನಡುವೆ ಸಂಚಾರ ನಡೆಸಲಿದೆ. ಮಂಗಳೂರಿನಿಂದ 6.40ಕ್ಕೆ ಹೊರಟು, 9.35ಕ್ಕೆ ದೆಹಲಿ ತಲುಪಲಿದೆ.

IX 2768 ಸಂಖ್ಯೆಯ ವಿಮಾನ ದೆಹಲಿ-ಮಂಗಳೂರು ನಡುವೆ ಸಂಚಾರ ನಡೆಸಲಿದೆ. ದೆಹಲಿಯಿಂದ 6.40ಕ್ಕೆ ಹೊರಡುವ ವಿಮಾನ 9.35ಕ್ಕೆ ಪುಣೆಯನ್ನು ತಲುಪಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!