

ಹೈದರಾಬಾದ್: ಕಾಲ್ತುಳಿತ ಪ್ರಕರಣದಲ್ಲಿ ಶುಕ್ರವಾರ (ಡಿ. 13) ಬೆಳಗ್ಗೆ ಬಂಧನಕ್ಕೊಳಗಾಗಿದ್ದ ಟಾಲಿವುಡ್ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಡಿ. 4ರಂದು ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಮಧ್ಯಾಹ್ನ ನಾಂಪಲ್ಲಿ ಕೋರ್ಟ್ ಅಲ್ಲು ಅರ್ಜನ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ (Allu Arjun Arrest).
ಯೂರ್ಟ್ ಹೊಡೆದ ಸಂತ್ರಸ್ತೆಯ ಪತಿ
ಮೃತ ರೇವತಿ ಅವರ ಪತಿ ಭಾಸ್ಕರ್ ನೀಡಿದ ದೂರಿನ ಮೇಲೆ ಪೊಲೀಸರು ಅಲ್ಲು ಅರ್ಜುನ್ ಅವರನ್ನು ವಶಕ್ಕೆ ಪಡೆದಿದ್ದರು. ಇದೀಗ ಭಾಸ್ಕರ್ ಯೂಟರ್ನ್ ಹೊಡೆದಿದ್ದು, ದೂರು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಭಾಸ್ಕರ್, ʼʼದೂರನ್ನು ಹಿಂಪಡೆಯಲು ನಾನು ಸಿದ್ಧ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ನಿರಪರಾಧಿ. ಅಲ್ಲು ಅರ್ಜುನ್ ಅವರನ್ನು ಬಂಧಿಸುತ್ತಾರೆ ಎಂದುಕೊಂಡಿರಲಿಲ್ಲ. ಕಾಲ್ತುಳಿತದಿಂದ ಪತ್ನಿ ಮರಣ ಹೊಂದಿದ ಘಟನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲʼʼ ಎಂದು ತಿಳಿಸಿದ್ದಾರೆ.
ಇನ್ನು ಅಲ್ಲು ಅರ್ಜುನ್ ಪರ ವಕೀಲ ನಿರಂಜನ್ ರೆಡ್ಡಿ ಅವರು ಮಾತನಾಡಿ, ಇದನ್ನು ಈ ಹಿಂದೆ ನಡೆದ ಶಾರುಖ್ ಖಾನ್ ಅವರ ಘಟನೆಯೊಂದಿಗೆ ಹೋಲಿಸಿದ್ದಾರೆ. ಇದೇ ರೀತಿಯ ಘಟನೆಯಲ್ಲಿ ಶಾರುಖ್ ಖಾನ್‌ಗೆ ಜಾಮೀನು ಲಬಿಸಿದ್ದರ ಬಗ್ಗೆ ಉಲ್ಲೇಖಿಸಿದ್ದಾರೆ. ʼʼತಮ್ಮ ʼರಾಯಿಸ್ʼ ಚಿತ್ರದ ಪ್ರಚಾರಕ್ಕಾಗಿ ಶಾರುಖ್ ಖಾನ್ ಗುಜರಾತ್‌ನ ವಡೋದರಾಕ್ಕೆ ತೆರಳಿದ್ದರು. ಈ ವೇಳೆ ಅವರು ಪ್ರೇಕ್ಷಕರತ್ತ ಟೀ ಶರ್ಟ್ ಎಸೆದಿದ್ದರು. ಆಗ ಕಾಲ್ತುಳಿತ ಸಂಭವಿಸಿ ಶಾರುಖ್ ಖಾನ್ ವಿರುದ್ಧ ನರಹತ್ಯೆಯ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್, ಸುಪ್ರೀಂ ಕೋರ್ಟ್ ಶಾರುಖ್ಜಾ ಖಾನ್‌ಗೆ ಜಾಮೀನು ಮಂಜೂರು ಮಾಡಿತ್ತುʼʼ ಎಂದು ತಿಳಿಸಿದ್ದಾರೆ. ತಮ್ಮ ಕಕ್ಷಿದಾರ ಅಲ್ಲು ಅರ್ಜುನ್ ಮತ್ತು ಸಂಧ್ಯಾ ಥಿಯೇಟರ್ ಬಳಿ ನಡೆದ ಈ ಘಟನೆಗೆ ಯಾವುದೇ ಸಂಬಂಧ ಇಲ್ಲ ಮತ್ತು ಅದಕ್ಕೆ ಅವರು ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರದ ಹಸ್ತಕ್ಷೇಪವಿಲ್ಲ
ಅಲ್ಲು ಅರ್ಜುನ್ ಬಂಧನ ಹಿಂದೆ ರಾಜಕೀಯದ ಕೈವಾಡ ಇದೆ ಎನ್ನುವ ವದಂತಿ ಹರಡಿದ್ದು, ಇದನ್ನು ತೆಲಂಗಾಣ ಸಿಎಂ ಮುಖ್ಯಮಂತ್ರಿ ರೇವಂತ್ ರೆಡ್ಡಿ ನಿರಾಕರಿಸಿದ್ದಾರೆ. ʼʼಅಲ್ಲು ಅರ್ಜುನ್ ವಿಚಾರದಲ್ಲಿ ಕಾನೂನು ತನ್ನ ಕೆಲಸ ಮಾಡಲಿದೆ. ಅವರ ಬಂಧನದಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರುʼʼ ಎಂದು ಹೇಳಿದ್ದಾರೆ.
ಇನ್ನು ಟಾಲಿವುಟ್ ಸೆಲೆಬ್ರಿಟಿಗಳಾದ ದಿಲ್ ರಾಜು, ತ್ರಿವಿಕ್ರಂ ಶ್ರೀನಿವಾಸ್, ನಾಗ್ ಅಶ್ವಿನ್, ಚಿರಂಜೀವಿ, ನಾಗ ಬಾಬು ಮತ್ತಿತರರು ಅಲ್ಲು ಅರ್ಜುನ್ ಬಂಧನವನ್ನು ಖಂಡಿಸಿದ್ದರು.
