ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ 2026-27 ಅನ್ನು ಮಂಡಿಸಲಿದ್ದಾರೆ. ಈ ಬಜೆಟ್ ಹಲವು ಕಾರಣಗಳಿಂದಾಗಿ ವಿಶೇಷ ಮಹತ್ವ ಪಡೆದುಕೊಂಡಿದ್ದು, ಇದು ಇತಿಹಾಸದಲ್ಲೇ ಭಾನುವಾರ ಮಂಡಿಸಲಾಗುತ್ತಿರುವ ಎರಡನೇ ಕೇಂದ್ರ ಬಜೆಟ್ ಎಂಬ ದಾಖಲೆ ಬರೆಯಲಿದೆ.

ಜೊತೆಗೆ, ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಸತತ 9ನೇ ಬಜೆಟ್ ಇದಾಗಿದ್ದು, ಭಾರತೀಯ ರಾಜಕೀಯ ಇತಿಹಾಸದಲ್ಲಿ ಅಪರೂಪದ ಸಾಧನೆಯಾಗಲಿದೆ.

ಇದಕ್ಕೂ ಮೊದಲು 1999ರಲ್ಲಿ ಫೆಬ್ರವರಿ 28ರಂದು ಭಾನುವಾರ ಬಜೆಟ್ ಮಂಡನೆಯಾಗಿತ್ತು. ಆಗ ಯಶವಂತ ಸಿನ್ಹಾ ಅವರು ಹಣಕಾಸು ಸಚಿವರಾಗಿದ್ದರು. ನಂತರ ಕೇಂದ್ರ ಸರ್ಕಾರ ಬಜೆಟ್ ದಿನಾಂಕವನ್ನು ಫೆಬ್ರವರಿ 1ಕ್ಕೆ ಮುಂಚಿತಗೊಳಿಸಿತು. ಫೆ.1ಕ್ಕೆ ದಿನಾಂಕ ಬದಲಾದ ಬಳಿಕ ಇದೇ ಮೊದಲ ಬಾರಿಗೆ ಬಜೆಟ್ ಭಾನುವಾರಕ್ಕೆ ಬಂದಿದೆ. ಈ ಹಿನ್ನೆಲೆ ಇಂದು ಮಂಡನೆಯಾಗುತ್ತಿರುವ ಬಜೆಟ್ ವಿಶೇಷ ಗಮನ ಸೆಳೆದಿದೆ.

ನಿರೀಕ್ಷೆಗಳೇನು?

ದೇಶದ ಆರ್ಥಿಕ ದಿಕ್ಕು ನಿರ್ಧರಿಸುವ ಬಜೆಟ್

ಬಜೆಟ್ 2026 ದೇಶದ ಆರ್ಥಿಕತೆಗೆ ನಿರ್ಣಾಯಕವಾಗಲಿದೆ ಎಂಬ ನಿರೀಕ್ಷೆ ತಜ್ಞ ವಲಯದಲ್ಲಿದೆ. ಜಾಗತಿಕ ವ್ಯಾಪಾರ ಒತ್ತಡಗಳು, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಸುಂಕ ನೀತಿಗಳು, ಹಾಗೂ ದೇಶೀಯ ಬೇಡಿಕೆಯನ್ನು ಬಲಪಡಿಸುವ ಅಗತ್ಯ ಈ ಎಲ್ಲಾ ಸವಾಲುಗಳ ನಡುವೆಯೇ ಸರ್ಕಾರ ಈ ಬಜೆಟ್ ಮಂಡಿಸುತ್ತಿದೆ.

ರಕ್ಷಣೆ, ಮೂಲಸೌಕರ್ಯ, ರೈಲ್ವೆ, ಇಂಧನ, ರಫ್ತು ಉತ್ತೇಜನ, ಅಗ್ಗದ ವಸತಿ ಯೋಜನೆಗಳು ಮತ್ತು ಬಂಡವಾಳ ವೆಚ್ಚ ಹೆಚ್ಚಳ ಇವು ಈ ಬಜೆಟ್‌ನ ಪ್ರಮುಖ ಆದ್ಯತೆಗಳಾಗಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಸಾಮಾಜಿಕ ಕಲ್ಯಾಣ ಯೋಜನೆಗಳಿಗೂ ಸರ್ಕಾರ ಒತ್ತು ನೀಡುವ ಸಾಧ್ಯತೆ ಇದೆ.

ಮಧ್ಯಮ ವರ್ಗದ ದೊಡ್ಡ ನಿರೀಕ್ಷೆ: ತೆರಿಗೆ ರಿಲೀಫ್

ಸಾಮಾನ್ಯ ಜನರ ದೃಷ್ಟಿಯಲ್ಲಿ ಬಜೆಟ್‌ನ ಪ್ರಮುಖ ಅಂಶವೆಂದರೆ ವೈಯಕ್ತಿಕ ಆದಾಯ ತೆರಿಗೆ. ಕಳೆದ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯಡಿ ತೆರಿಗೆ ಮುಕ್ತ ಆದಾಯ ಮಿತಿಯನ್ನು ₹12 ಲಕ್ಷಕ್ಕೆ ಏರಿಸಲಾಗಿತ್ತು. ಈ ಬಾರಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ಇನ್ನಷ್ಟು ಬದಲಾವಣೆ, ಮಧ್ಯಮ ವರ್ಗಕ್ಕೆ ಹೆಚ್ಚಿನ ರಿಲೀಫ್ ಅಥವಾ ಜಂಟಿ ತೆರಿಗೆ ಆಯ್ಕೆಯಂತಹ ಹೊಸ ಪ್ರಸ್ತಾವನೆಗಳ ನಿರೀಕ್ಷೆ ಇದೆ.

ಆಹಾರ ಹಣದುಬ್ಬರ ನಿಯಂತ್ರಣಕ್ಕೆ ಕ್ರಮ?

ಟೊಮೆಟೊ, ಈರುಳ್ಳಿ, ಆಲೂಗಡ್ಡೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಳಿತ ಸಾಮಾನ್ಯ ಕುಟುಂಬಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಜೆಟ್ 2026 ಪೂರೈಕೆ ಸರಪಳಿಯನ್ನು ಬಲಪಡಿಸುವ ಮೂಲಕ ಆಹಾರ ಹಣದುಬ್ಬರವನ್ನು ನಿಯಂತ್ರಿಸುವ ಕ್ರಮಗಳನ್ನು ಒಳಗೊಂಡಿರಬಹುದು ಎಂಬ ನಿರೀಕ್ಷೆ ಇದೆ.

ಹಣಕಾಸು ಶಿಸ್ತು ಮೇಲೆ ಸರ್ಕಾರದ ಗಮನ

ಸರ್ಕಾರ FY27 ರಲ್ಲಿ ಹಣಕಾಸಿನ ಕೊರತೆಯನ್ನು GDP ಯ 4.4% ಮಟ್ಟದಲ್ಲಿ ಕಾಯ್ದುಕೊಳ್ಳಲು ಪ್ರಯತ್ನಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವ ಜೊತೆಗೆ ಆರ್ಥಿಕ ಶಿಸ್ತಿನ ಬದ್ಧತೆಯನ್ನು ತೋರಿಸುತ್ತದೆ. ಜೊತೆಗೆ ಸಾಲ-ಜಿಡಿಪಿ ಅನುಪಾತವನ್ನು FY31 ರ ವೇಳೆಗೆ ಸುಮಾರು 50%ಕ್ಕೆ ಇಳಿಸುವ ಗುರಿಯ ಮೇಲೂ ಸರ್ಕಾರ ಗಮನಹರಿಸಿದೆ.

ಬಂಡವಾಳ ವೆಚ್ಚ ಮತ್ತು ರಕ್ಷಣಾ ವಲಯಕ್ಕೆ ಉತ್ತೇಜನ

FY27ರಲ್ಲಿ ಬಂಡವಾಳ ವೆಚ್ಚ ಮತ್ತೆ ವೇಗ ಪಡೆಯುವ ಸಾಧ್ಯತೆ ಇದೆ. ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚಟುವಟಿಕೆಗೆ ಇದು ಬಲ ನೀಡಲಿದೆ. ‘ಮೇಕ್ ಇನ್ ಇಂಡಿಯಾ’ಗೆ ಬೆಂಬಲವಾಗಿ ರಕ್ಷಣಾ ಉತ್ಪಾದನೆ ಮತ್ತು ಸ್ಥಳೀಯ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಘೋಷಣೆಯಾಗುವ ಸಾಧ್ಯತೆಯೂ ಇದೆ.

ಕೃಷಿ, MSME ಮತ್ತು ರಫ್ತು ವಲಯಗಳು

ಕೃಷಿ ಮತ್ತು MSMEಗಳನ್ನು ಸರ್ಕಾರ ಭಾರತದ ಬೆಳವಣಿಗೆಯ ಪ್ರಮುಖ ಎಂಜಿನ್‌ಗಳೆಂದು ಗುರುತಿಸಿದೆ. ರೈತರ ಆದಾಯ ಹೆಚ್ಚಿಸುವುದು, ಗ್ರಾಮೀಣ ಬೇಡಿಕೆಯನ್ನು ಬಲಪಡಿಸುವುದು ಮತ್ತು ಸಣ್ಣ ಉದ್ಯಮಗಳಿಗೆ ಕೈಗೆಟುಕುವ ಸಾಲ ಒದಗಿಸುವ ಕ್ರಮಗಳು ಈ ಬಜೆಟ್‌ನ ಪ್ರಮುಖ ಭಾಗವಾಗಬಹುದು.

ಒಟ್ಟಾರೆ, ಬಜೆಟ್ 2026 ತೆರಿಗೆ ಸುಧಾರಣೆ, ಆರ್ಥಿಕ ಶಿಸ್ತು ಮತ್ತು ಜನಪರ ಘೋಷಣೆಗಳ ನಡುವೆ ಸಮತೋಲನ ಸಾಧಿಸಬಹುದೇ ಎಂಬುದೇ ಈಗ ದೇಶದ ದೊಡ್ಡ ಪ್ರಶ್ನೆಯಾಗಿದೆ. ಇಂದು ಮಂಡನೆಯಾಗುವ ಸಂಡೇ ಬಜೆಟ್ ಭಾರತದ ಮುಂದಿನ ಆರ್ಥಿಕ ವರ್ಷದ ದಿಕ್ಕನ್ನು ನಿರ್ಧರಿಸಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!