ಪುತ್ತೂರು: ನಿಯಮ ಹಾಗೂ ಅವಧಿ ಮೀರಿ ಕಾರ್ಯಾಚರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮರಕೊಟ್ಟು ಟೋಲ್‌ಗೇಟ್ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಆ.18ರಂದು ಜಿಲ್ಲಾಧಿಕಾರಿ ಕಚೇರಿ ಚಲೋ ಹಮ್ಮಿಕೊಳ್ಳಲಾಗಿದೆ.ಮಂಗಳವಾರ ಬೆಳಿಗ್ಗೆ 9.30ಕ್ಕೆ ಬ್ರಹ್ಮರಕೊಟ್ಟು ಟೋಲ್‌ಗೇಟ್ ಬಳಿಯಿಂದ ಜಾಥಾ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಹಾಗೂ ಕಬಕ ಬ್ಲಾಕ್ ಸಮಿತಿ ವತಿಯಿಂದ ಕಬಕ ಜಂಕ್ಷನ್‌ನಲ್ಲಿ ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಕಾರ್ಯಕ್ರಮದ ಕುರಿತು ಪ್ರಚಾರ ನಡೆಸಲಾಯಿತು.ಹೆದ್ದಾರಿ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ, ಸಮರ್ಪಕ ನಿರ್ವಹಣೆ ಇಲ್ಲದ ಹಾಗೂ ಕಳಪೆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಹಲವು ವರ್ಷಗಳಿಂದ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು SDPI ಆರೋಪಿಸಿದೆ. ಟೋಲ್‌ಗೇಟ್ ಸ್ಥಗಿತಕ್ಕೆ ಆಗ್ರಹಿಸಿ ನಡೆಯುವ ಈ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ಪಕ್ಷ, ಜಾತಿ ಭೇದ ಮರೆತು ಜಿಲ್ಲೆಯ ನಾಗರಿಕರು ಭಾಗವಹಿಸುವಂತೆ ಪಕ್ಷ ಮನವಿ ಮಾಡಿದೆ.ಈ ಸಂದರ್ಭ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ.ಕೆ., ಜೊತೆ ಕಾರ್ಯದರ್ಶಿ ರಹೀಂ ಪುತ್ತೂರು, ಕಬಕ ಬ್ಲಾಕ್ ಅಧ್ಯಕ್ಷ ಸಮೀರ್ ಮುರ, ಕಾರ್ಯದರ್ಶಿ ಶಾಕೀರ್ ಕಬಕ ಹಾಗೂ ಪಕ್ಷದ ಬೆಂಬಲಿತ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸಿದ್ದೀಕ್ ಉರಿಮಜಲು ಉಪಸ್ಥಿತರಿದ್ದರು.











