ಪುತ್ತೂರು: ನಗರದ ಸಿಟಿಒ ಗುಡ್ಡೆಯಲ್ಲಿ ನಿರ್ಮಾಣಗೊಂಡಿರುವ ಅಲ್ಪಸಂಖ್ಯಾತ ಸೇವಾ ಕೇಂದ್ರದ ಕಟ್ಟಡದ ಮುಂದಿನ ಬಳಕೆ ಕುರಿತು ಚರ್ಚೆ ಆರಂಭವಾಗಿದೆ. ಕಟ್ಟಡವನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಾಸ್ಟೆಲ್ ಆಗಿ ಪರಿವರ್ತಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಶಾಸಕ ಅಶೋಕ್ ರೈ ಸೆ.28ರಂದು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿದರು.ನಗರದ ಕೇಂದ್ರ ಭಾಗದಿಂದ ದೂರದಲ್ಲಿರುವ ಗುಡ್ಡದ ಮೇಲ್ಭಾಗದಲ್ಲಿ ಸೇವಾ ಕೇಂದ್ರ ಆರಂಭಿಸಿದರೆ ಸಾರ್ವಜನಿಕರಿಗೆ ಅರ್ಜಿ ಸಲ್ಲಿಕೆ ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಲು ಅನಾನುಕೂಲವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ಹಾಸ್ಟೆಲ್ ಆಗಿ ಬಳಸುವಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರು ಶಾಸಕರಿಗೆ ಮನವಿ ಮಾಡಿದ್ದರು.ಈ ಕುರಿತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಶಾಸಕ ಅಶೋಕ್ ರೈ ಈಗಾಗಲೇ ಶಿಫಾರಸು ಪತ್ರ ಕಳುಹಿಸಿದ್ದಾರೆ. ಮತ್ತೊಂದೆಡೆ, ಕಟ್ಟಡವನ್ನು ಮೂಲ ಉದ್ದೇಶಕ್ಕೇ ಬಳಸಬೇಕೆಂದು ಎಸ್‌ಡಿಪಿಐ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಕಟ್ಟಡದ ಬಳಕೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ.ಹಜ್ ಭವನಗಳಲ್ಲಿ ತರಬೇತಿ: ಅಧಿಕಾರಿಗಳ ಮಾಹಿತಿಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಮಹಮ್ಮದ್ ಫಾರೂಕ್ ಮಾಹಿತಿ ನೀಡಿ, ಸೇವಾ ಕೇಂದ್ರದ ಕಟ್ಟಡವನ್ನು ಹಾಸ್ಟೆಲ್ ಆಗಿ ಪರಿವರ್ತಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ ಎಂದರು.ಅಲ್ಪಸಂಖ್ಯಾತ ಸೇವಾ ಕೇಂದ್ರಗಳ ಮೂಲಕ ನಡೆಯುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ರಾಜ್ಯದ ಹಜ್ ಭವನಗಳಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಹಾಸನದಲ್ಲೂ ಇದೇ ಮಾದರಿಯ ಸೇವಾ ಕೇಂದ್ರದ ಕಟ್ಟಡವನ್ನು ಹಾಸ್ಟೆಲ್ ಆಗಿ ಪರಿವರ್ತಿಸಲಾಗಿದೆ. ಮಂಗಳೂರಿಗೂ ಹಜ್ ಭವನ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಅಲ್ಪಸಂಖ್ಯಾತ ಯುವಕರ ತರಬೇತಿ ಕಾರ್ಯಕ್ರಮಗಳನ್ನು ಅಲ್ಲಿಯೇ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.ಒಂದು ವರ್ಷದ ಮಟ್ಟಿಗೆ ಮೆಡಿಕಲ್ ಕಾಲೇಜು ಹಾಸ್ಟೆಲ್?ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಾಣವಾಗಲಿದೆ. ಆದರೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಪೂರ್ಣಗೊಳ್ಳುವ ಮುನ್ನ ಕಾಲೇಜು ಆರಂಭವಾದರೆ, ಇಲಾಖೆಯ ಅನುಮತಿ ಪಡೆದು ಸಿಟಿಒ ಗುಡ್ಡೆಯ ಕಟ್ಟಡವನ್ನು ಒಂದು ವರ್ಷದ ಮಟ್ಟಿಗೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಆಗಿ ಬಳಸುವ ಚಿಂತನೆಯಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.ಈ ಸಂದರ್ಭ ಅಲ್ಪಸಂಖ್ಯಾತ ಸಮುದಾಯದವರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಪುತ್ತೂರು ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಜಾದ್, ಶಕೂರ್ ಹಾಜಿ, ಯಾಕೂಬ್ ಮಲಾರ್, ಅರ್ಷದ್ ದರ್ಬೆ, ಫಾರೂಕ್ ಬಾಯಬ್ಬೆ, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!