ಕಡಬ: ಆಲಂಕಾರು ಪೇಟೆಯಲ್ಲಿ ಥಾರ್ ಜೀಪು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದ ಬಳಿಕ ಪರಾರಿಯಾಗಿದ್ದ ಜೀಪು ಚಾಲಕನನ್ನು ಪೊಲೀಸರು ಬಂಧಿಸಿ, ಬಳಿಕ ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.ಆಲಂಕಾರು ನಿವಾಸಿ ಇಲ್ಯಾಸ್ ಎನ್.ಎ. (33) ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ.ಸೆ.25ರಂದು ರಾತ್ರಿ ಉಪ್ಪಿನಂಗಡಿ–ಕಡಬ ರಾಜ್ಯ ಹೆದ್ದಾರಿಯ ಆಲಂಕಾರು ಪೇಟೆಯಲ್ಲಿ ಈ ಅಪಘಾತ ಸಂಭವಿಸಿತ್ತು. ಕೆಎ-21-ಎಂ-0233 ನೋಂದಣಿಯ ಥಾರ್ ಜೀಪು, ಆಚಾರಿ ಕೊಟ್ಟೆ ಕಡೆಗೆ ತೆರಳುತ್ತಿದ್ದ ಕೆಎ-21-ವೈ-5006 ನೋಂದಣಿಯ ಬೈಕ್‌ಗೆ ಡಿಕ್ಕಿ ಹೊಡೆದಿತ್ತು.ಅಪಘಾತದಲ್ಲಿ ಬೈಕ್ ಸವಾರ ಆಲಂಕಾರು ಗ್ರಾಮದ ನಾಡ್ತಿಲ ನಿವಾಸಿ ಧರ್ಣಪ್ಪ ಗೌಡ ಅವರ ಪುತ್ರ ಲೋಕೇಶ್ (42) ಗಂಭೀರವಾಗಿ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಅಪಘಾತದ ಬಳಿಕ ಜೀಪು ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರು ಜಮಾಯಿಸಿ ಪರಾರಿಯಾಗಿದ್ದ ಜೀಪಿಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ನಡುಗುಡ್ಡೆ ಎಂಬಲ್ಲಿ ಮನೆಯೊಂದರ ಅಂಗಳದಲ್ಲಿ ಜೀಪು ಪತ್ತೆಯಾಗಿದ್ದು, ಚಾಲಕ ನಾಪತ್ತೆಯಾಗಿದ್ದ.ಸ್ಥಳದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿಯೂ ನಿರ್ಮಾಣಗೊಂಡಿತ್ತು. ಪೊಲೀಸರು ಜೀಪನ್ನು ವಶಕ್ಕೆ ಪಡೆದು ಚಾಲಕನ ಪತ್ತೆಗಾಗಿ ಶೋಧ ನಡೆಸಿದ್ದರು.ಇದೀಗ ಆರೋಪಿ ಇಲ್ಯಾಸ್‌ನನ್ನು ಪೊಲೀಸರು ಬಂಧಿಸಿದ್ದು, ಆತ ಮಾದಕ ವಸ್ತು ಸೇವಿಸಿದ್ದಾನೆಯೇ ಎಂಬುದನ್ನು ಪರಿಶೀಲಿಸಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಆರೋಪಿಯನ್ನು ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.











