ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.17ರಂದು ನಾಗರಪಂಚಮಿ ಪ್ರಯುಕ್ತ ಮೂಲ ನಾಗಸನ್ನಿಧಿಯಲ್ಲಿ ಸಂಪ್ರದಾಯದಂತೆ ನಾಗಾರಾಧನೆ ನಡೆಯಲಿದೆ.ಬೆಳಗ್ಗೆ 5.30ರಿಂದ ನಾಗದೇವರಿಗೆ ವಿವಿಧ ಅಭಿಷೇಕಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ 12.30ರಿಂದ ನಾಗತಂಬಿಲ, ಸಂಜೆ 4ರಿಂದ ಆಶ್ಲೇಷ ಬಲಿ ನಡೆಯಲಿದೆ. ನಾಗಪೂಜೆ ಹಾಗೂ ಪಂಚಾಮೃತ ಅಭಿಷೇಕವೂ ನೆರವೇರಲಿದೆ.ನಾಗದೇವರನ್ನು ಮೂಲ ನಾಗಸನ್ನಿಧಿಯಲ್ಲಿ ಪ್ರತಿಷ್ಠಾಪಿಸಿದ ಬಳಿಕ ಈ ವರ್ಷದ ನಾಗರಪಂಚಮಿ ಆಚರಣೆ ಅಲ್ಲಿಯೇ ನಡೆಯಲಿದೆ. ವಿದ್ವಾನ್ ನಿಟ್ಟೆ ಪ್ರಸನ್ನ ಆಚಾರ್ಯ ಹಾಗೂ ಗುರು ತಂತ್ರಿಗಳ ನಿರ್ದೇಶನದಂತೆ ಬೆಳಗ್ಗಿನಿಂದಲೇ ಪ್ರಥಮ ನಾಗಾರಾಧನೆ ಆರಂಭಗೊಳ್ಳಲಿದೆ.ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ, ದೇವಸ್ಥಾನದ ಒಳಾಂಗಣದಲ್ಲಿ ನವಗ್ರಹಗಳನ್ನು ಪ್ರತಿಷ್ಠಾಪಿಸಿ ಅಲ್ಲಿನ ನಿಯಮದಂತೆ ಆರಾಧನೆ ನಡೆಸುವುದು, ಅಯ್ಯಪ್ಪ ವಿಗ್ರಹವನ್ನು ಬಾಲಾಲಯದಲ್ಲಿರಿಸಿ ಗುಡಿ ನಿರ್ಮಾಣವಾದ ಬಳಿಕ ಪ್ರತಿಷ್ಠಾಪಿಸಿ ಪೂಜಿಸುವುದು ಹಾಗೂ ನಾಗನ ಗುಡಿಯಲ್ಲಿದ್ದ ನಾಗನನ್ನು ಮೂಲ ನಾಗಾಲಯದಲ್ಲಿ ಪ್ರತಿಷ್ಠಾಪಿಸಿ ಅಲ್ಲಿನ ನಿಯಮದಂತೆ ಪ್ರತಿ ತಿಂಗಳು ಶುಕ್ಲ ಪಂಚಮಿಯಂದು ತಂಬಿಲ ನಡೆಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಆಶ್ಲೇಷ ಬಲಿ ಸೇವೆ ಇದ್ದಲ್ಲಿ ಅದೇ ದಿನ ನಡೆಸಲಾಗುವುದು. ಪ್ರತಿವರ್ಷ ಪೂಕರೆ ಉತ್ಸವ ಹಾಗೂ ಕಂಬಳದ ದಿನ ನೀಡಲಾಗುವ ನಾಗತಂಬಿಲ ಸೇವೆಯನ್ನೂ ಮುಂದುವರಿಸಲಾಗುವುದು ಎಂದು ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ತಿಳಿಸಿದ್ದಾರೆ.ಭಕ್ತರು ನಾಗಪೂಜೆ ಸೇರಿದಂತೆ ವಿವಿಧ ಸೇವೆಗಳನ್ನು ಮಾಡಿಸಲು ದೇವಳದ ಕೌಂಟರ್‌ನಲ್ಲಿ ಸೇವಾ ರಶೀದಿ ಪಡೆಯುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ತಿಳಿಸಿದ್ದಾರೆ.











