ಪುತ್ತೂರು; ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಮಾ.೨ರಂದು ನಡೆಯಲಿದ್ದು, ಈ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಅಭೂತಪೂರ್ವ ಜಯ ಕಾಣಲಿದ್ದಾರೆ. ರೈತಹಿತಾಸಕ್ತಿಗಾಗಿ ದುಡಿಯುವ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ೧೨ ಮಂದಿ ಹೊಸಮುಖಗಳು ಚುನಾವಣಾ ಕಣದಲ್ಲಿದ್ದಾರೆ. ಯಾವುದೇ ಬಂಡಾಯವೂ ಪರಿಣಾಮಕಾರಿಯಾಗಲಾರದು ಎಂದು ಸುಳ್ಯ ಬಿಜೆಪಿ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.


ಶುಕ್ರವಾರ ಪುತ್ತೂರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳ ಅವಕಾಶವಾದಿತನಕ್ಕಾಗಿ ಚುನಾವಣೆಯಲ್ಲಿ ಬಂಡಾಯ ಏರ್ಪಟ್ಟಿದೆ. ಕಳೆದ ೨೦ ವರ್ಷಗಳಿಂದ ಅಧ್ಯಕ್ಷರಾಗಿದ್ದ ವ್ಯಕ್ತಿಯೊಬ್ಬರು ಇದರ ಮುಂಚೂಣಿಯಲ್ಲಿದ್ದಾರೆ. ಆಲಂಕಾರು ಸೊಸೈಟಿಯಲ್ಲಿ ಹಣದ ಅವ್ಯವಹಾರ ಆಗಿದೆ ಎಂಬ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತಾಗಿದೆ. ಪಕ್ಷಕ್ಕೆ ಸೆಡ್ಡು ಹೊಡೆಯುವವರಿಗೆ ಈ ಬಾರಿ ಮತದಾರರು ಸರಿಯಾದ ಪಾಠ ಕಳಿಸುತ್ತಾರೆ ಎಂದು ಅವರು ಹೇಳಿದರು.
ಪಕ್ಷದ ಹಿತದೃಷ್ಟಿಯಿಂದ ಸಮನ್ವಯತೆ ಕಾಪಾಡಿಕೊಳ್ಳಲು ನಾವು ಪ್ರಯತ್ನ ಮಾಡಿದ್ದೇವೆ. ಆದರೆ ಅದಕ್ಕೆ ಪ್ರಸ್ತುತ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿರೋಧಿ ಬಣ ಒಪ್ಪಿಕೊಂಡಿಲ್ಲ. ಕಳೆದ ೫ ವರ್ಷಗಳಿಂದ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿಲ್ಲದವರು ಈಗ ನಾವು ಬಿಜೆಪಿ ಎಂದು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೇಸ್ ನೊಂದಿಗೆ ಸಖ್ಯ ಬೆಳೆಸಿಕೊಂಡು ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಇಲ್ಲ ಸಲ್ಲದ ಆರೋಪಗಳಿಗೆ ಯಾವುದೇ ಹುರುಳಿಲ್ಲ ಎಂದು ಅವರು ತಿಳಿಸಿದರು.
ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಧರ್ಮಪಾಲ ರಾವ್ ಅವರು ಮಾತನಾಡಿ, ಹಣದ ಅವ್ಯವಹಾರ ಎಂಬುವುದು ಕಟ್ಟುಕತೆ.  ಕಳೆದ ೫ ವರ್ಷಕ್ಕೆ ಮೊದಲು ಸಂಘದಲ್ಲಿ ರೂ.೪.೭೬ ಕೋಟಿ ಪಾಲು ಬಂಡವಾಳ ಇದ್ದದ್ದು, ಈಗ ೮.೭೬ ಕೋಟಿ ಆಗಿದೆ. ರೂ. ೪.೪೮ ಇದ್ದ ಠೇವಣಿ ಈಗ ರೂ.೯೮.೦೨ ಕೋಟಿಗೆ ತಲುಪಿದೆ. ೪.೭೭ ಕೋಟಿ ಇದ್ದ ವ್ವವಹಾರ ಪ್ರಸ್ತುತ ನಮ್ಮ ರೂ. ೧೦೦೦ ಕೋಟಿ ಆಗಿದೆ.  ಹಳೆನೇರೆಂಕಿಯಲ್ಲಿ ಜಾಗ ಖರೀದಿ ಮಾಡಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ೨೭೫೭ ಮಂದಿ ರೈತರಿಗೆ ಬೆಳೆವಿಮೆ ಬರುವಂತಾಗಿದೆ. ನಾವು ಅಧಿಕಾರಕ್ಕೆ ಬರುವ ಹಂತದಲ್ಲಿ ಸಂಘದಲ್ಲಿದ್ದ ಸುಮಾರು ರೂ.೬ ಕೋಟಿ ಠೇವಣಿಯನ್ನು ವಾಪಾಸು ತೆಗೆಯುವ ಕೆಲಸ ಮಾಡಿ ನಮಗೆ ತೊಂದರೆ ಕೊಡುವ ಕೆಲಸವನ್ನೂ ಮಾಡಿದ್ದಾರೆ. ಆದರೆ ನಾವು ಎದೆಗುಂದದೆ ಈ ಠೇವಣಿಯನ್ನು ಇಮ್ಮಡಿಗೊಳಿಸಿದ್ದೇವೆ. ನಮ್ಮ ಸಂಘದ ಮತದಾರರು ಈ ವಿಚಾರವನ್ನು ತಿಳಿದಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ನಮ್ಮ ಪರವಾಗಿ ಮತ ಚಲಾವಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸುಳ್ಯ ಬಿಜೆಪಿ ಮಂಡಲದ ಪ್ರ.ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಶಿವಪ್ರಸಾದ್ ನಡುತೋಟ, ಕೊÊಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ಮತ್ತು ಕುಟ್ರುಪ್ಪಾಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ದೇಂತಾರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!