
ಮಹಿಳಾ ಹಾಸ್ಟೆಲ್ನಲ್ಲಿ ರಹಸ್ಯ ಕ್ಯಾಮೆರಾವನ್ನು ಅಳವಡಿಸಿ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಹಾಸ್ಟೆಲ್ ವಾರ್ಡನ್ನನ್ನು ಪೊಲೀಸರು ಬಂಧಿಸಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕಿಸ್ತರೆಡ್ಡಿಪೇಟೆಯಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ನಡೆದಿದೆ.
ಬಂಧಿತ ಹಾಸ್ಟೆಲ್ ವಾರ್ಡನ್ನನ್ನು ಮಹೇಶ್ವರ್ ರಾವ್ ಎಂದು ಗುರುತಿಸಲಾಗಿದೆ. ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್‌ನಲ್ಲಿಯೇ ಇಂತಹ ಘಟನೆ ನಡೆದಿದ್ದು, ಸ್ಥಳೀಯ ಜನರಲ್ಲಿ ಭಾರಿ ಆತಂಕ ಮೂಡಿಸಿದೆ.
ವಿಲ್ಲಾ ಸಂಖ್ಯೆ 75ರಲ್ಲಿರುವ ಹಾಸ್ಟೆಲ್‌ನಲ್ಲಿ ಕ್ಯಾಮೆರಾ ಪತ್ತೆಯಾಗಿದೆ. ವಿದ್ಯಾರ್ಥಿಗಳ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಅಮೀನ್‌ಪುರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ಸ್ಪೈ ಕ್ಯಾಮೆರಾದಲ್ಲಿರುವ ಹಲವಾರು ಚಿಪ್‌ಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಮಧ್ಯೆ ಮಹಿಳಾ ಹಾಸ್ಟೆಲ್‌ನಲ್ಲಿ ನಡೆದ ರಹಸ್ಯ ಕ್ಯಾಮೆರಾ ಘಟನೆಯಲ್ಲಿ ಆಘಾತಕಾರಿ ವಿಷಯಗಳು ಸಹ ಬೆಳಕಿಗೆ ಬರುತ್ತಿವೆ. ಮಹೇಶ್ವರ ರಾವ್ ಎಂಬ ವ್ಯಕ್ತಿ ತನ್ನ ಹೆಂಡತಿ ಮತ್ತು ತಾಯಿ ಮನೆಯಲ್ಲಿ ಜಗಳವಾಡುತ್ತಿದ್ದ ಕಾರಣ ಮೊದಲು ಮನೆಯಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿದ್ದ ಎಂದು ವರದಿಯಾಗಿದೆ. ಕ್ಯಾಮೆರಾವನ್ನು ಅಮೆಜಾನ್ನಲ್ಲಿ ಖರೀಸಿದ್ದ. ಯಾರು ಏನು ಮಾಡುತ್ತಿದ್ದಾರೆಂದು ಕಂಡುಹಿಡಿಯುವ ಚಪಲ ಹೊಂದಿದ್ದ ಮಹೇಶ್ವರ್ ರಾವ್, ಹಾಸ್ಟೆಲ್ ಅಡುಗೆಮನೆಯಲ್ಲಿ ಕ್ಯಾಮೆರಾ ಅಳವಡಿಸಿದ್ದ. ಅದೂ ಸಾಲದು ಎಂಬಂತೆ ಹುಡುಗಿಯರ ಕೋಣೆಯಲ್ಲಿಯೂ ಕ್ಯಾಮೆರಾ ಅಳವಡಿಸಿದ್ದ. ಯುವತಿಯೊಬ್ಬಳು ಹೇಗೋ ಕ್ಯಾಮೆರಾವನ್ನು ಪತ್ತೆಹಚ್ಚಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಯಾರಿಗೂ ಅನುಮಾನ ಬರದ ರೀತಿಯಲ್ಲಿ ಫೋನ್ ಚಾರ್ಜರ್ ಒಳಗೆ ರಹಸ್ಯ ಕ್ಯಾಮೆರಾಗಳನ್ನು ಮರೆಮಾಡಲಾಗಿತ್ತು. ಕ್ಯಾಮೆರಾ ಒಳಗೆ ವಿಡಿಯೋಗಳು ಇರುವುದು ಪ್ರಾಥಮಿಕ ತಪಾಸಣೆಯಲ್ಲಿ ತಿಳಿದುಬಂದಿದೆ. ಚಾರ್ಜರ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ರೆಕಾರ್ಡ್ ಮಾಡಲಾದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆಯೇ ಅಥವಾ ಬೇರೆಯವರಿಗೆ ಮಾರಾಟ ಮಾಡಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಷ್ಟು ಸಮಯದವರೆಗೆ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂಬುದನ್ನು ಸಹ ಪತ್ತೆಹಚ್ಚಬೇಕಿದೆ. ನಮಗೆ ಬಂದಿರುವ ಪುರಾವೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಬಲವಾದ ತನಿಖೆ ನಡೆಯುತ್ತಿದೆ. ಎಲ್ಲ ಮುಗಿದ ನಂತರವೇ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.
ಇನ್ನು ಈ ಘಟನೆಯು ಹಾಸ್ಟೆಲ್‌ಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ ಮತ್ತು ಅಂತಹ ಗೌಪ್ಯತಾ ಉಲ್ಲಂಘನೆಗಳನ್ನು ತಡೆಗಟ್ಟಲು ಕಠಿಣ ನಿಯಮಗಳು ಮತ್ತು ಮೇಲ್ವಿಚಾರಣಾ ಕ್ರಮಗಳ ಬೇಡಿಕೆಯನ್ನು ತೀವ್ರಗೊಳಿಸಿದೆ.
