
ಭಾರತ ಪ್ರವಾಸಕ್ಕೆಂದು ಗುಂಪಿನೊಂದಿಗೆ ಬಂದಿದ್ದ ಇಸ್ರೇಲಿ ಪ್ರಜೆ ಹಾಗೂ ಹೋಮ್ ಸ್ಟೇ ಮಾಲಕಿ ಮೇಲೆ ಅತ್ಯಾಚಾರ ಮಾತ್ರವಲ್ಲದೆ, ಜತೆಗಿದ್ದ ಪ್ರವಾಸಿಗರ ಮೇಲೆ ದಾಳಿ ಮಾಡಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರೆಸಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸಾಣಾಪುರ ಎಂಬಲ್ಲಿ ಘಟನೆ ನಡೆದಿದೆ. ಪ್ರವಾಸಿಗರ ಮೇಲೆ ದಾಳಿ ಮಾಡಲು ಮುಂದಾದಾಗ ಮೂವರು ನಾಲೆಗೆ ಹಾರಿದ್ದಾರೆ. ಇಬ್ಬರು ಈಜಿ ದಡ ಸೇರಿದರೆ ಇನ್ನೊಬ್ಬಾತ ಮೃತಪಟ್ಟಿದ್ದರು. ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿಗಳಲ್ಲಿ ಇಬ್ಬರನ್ನು ಸೆರೆ ಹಿಡಿಯಲಾಗಿದೆ.
ಘಟನೆ ನಡೆದ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೊಪ್ಪಳ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದರು. ಅದರಂತೆ ಇಂದು ಇಬ್ಬರನ್ನು ಹಿಡಿದಿದ್ದಾರೆ. ಮಲ್ಲೇಶ ಹಾಗೂ ಚೇತನಸಾಯಿ ಬಂಧನವಾಗಿದ್ದು, ಇನ್ನೊಬ್ಬನಿಗೆ ಹುಡುಕಾಟ ಮುಂದುವರೆದಿದೆ.
ನಾಲೆಯಲ್ಲಿ ಮೃತಪಟ್ಟ ಯುವಕನನ್ನು ಒಡಿಶಾ ಮೂಲದ ಪ್ರವಾಸಿಗ ಎಂದು ಗುರುತಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ವಿದೇಶಿ ಮಹಿಳೆ ಸೇರಿ ಇಬ್ಬರಿಗೆ ಕೊಪ್ಪಳದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಕೊಪ್ಪಳ ಎಸ್‌ಪಿ ಡಾ.ರಾಮ ಅರಸಿದ್ದಿ ತಿಳಿಸಿದ್ದಾರೆ.
ಭಾರತ ಪ್ರವಾಸಕ್ಕೆ ಬಂದ ವಿದೇಶಿ ಮಹಿಳೆಗೆ ಕಹಿನೆನಪು
ಇಸ್ರೇಲ್ ಮಹಿಳೆಯೊಬ್ಬರು ಅಮೆರಿಕದ ಪ್ರವಾಸಿಗರ ಜತೆ ಸೇರಿ ಭಾರತಕ್ಕೆ ಬಂದಿದ್ದರು. ಒಡಿಶಾದ ಒಬ್ಬರು ಹಾಗೂ ಮಹಾರಾಷ್ಟ್ರದ ಮತ್ತೊಬ್ಬರು ಜತೆಗೂಡಿ ಹಂಪಿಗೆ ಪ್ರವಾಸಕ್ಕೆ ಬಂದಿದ್ದರು. ಗುರುವಾರ ಗಂಗಾವತಿ ತಾಲ್ಲೂಕಿನ ಸಾಣಾಪುರ ಹೋಂಸ್ಟೇಯಲ್ಲಿ ತಂಗಿದ್ದರು. ಅಂದು ಸಂಜೆ ತುಂಗಭದ್ರಾ ನಾಲೆಯ ಕಡೆಗೆ ಹೋಂ ಸ್ಟೇ ಮಾಲೀಕರ ಜತೆಗೆ ಸೇರಿ ಐವರು ಹೋಗಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಗುಂಪು ಹಣ ಕೇಳುವ ನೆಪದಲ್ಲಿ ಬೆದರಿಕೆ ಹಾಕಿದೆ. ವಿದೇಶಿ ಮಹಿಳೆ ಹಾಗೂ ಹೋಂಸ್ಟೇ ಮಾಲೀಕರ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪ ಕೇಳಿ ಬಂದಿದೆ. ಇದೇ ವೇಳೆ ಮೂವರು ಯುವಕರ ಮೇಲೆ ಗುಂಪು ದಾಳಿ ಮಾಡಲು ಮುಂದಾದಾಗ ನಾಲೆಗೆ ಹಾರಿದ್ದರು. ರಭಸದಲ್ಲಿದ್ದ ನೀರಿನಲ್ಲಿ ಇಬ್ಬರು ಈಜಿ ಪರಾರಿಯಾದರೆ ಒಡಿಶಾದ ಪ್ರವಾಸಿ ನಾಪತ್ತೆಯಾಗಿದ್ದ. ಆತನ ಶವ ನಾಲೆಯಲ್ಲಿಯೇ ಪತ್ತೆಯಾಗಿದೆ.
ಘಟನೆ ಸಂಬಂಧ ಅಮೆರಿಕ ಪ್ರವಾಸಿಗ ಡೇನಿಯಲ್ ಹಾಗೂ ಮಹಾರಾಷ್ಟ್ರದ ಪ್ರವಾಸಿಗ ಪಂಕಜ್ ಎಂಬುವವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಮೃತಪಟ್ಟ ಒಡಿಶಾ ಪ್ರವಾಸಿಗ ಬಿಬಶ್ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ.
ಇಸ್ರೇಲ್ ಮಹಿಳೆಯಿಂದ ದೂರು
ಘಟನೆ ಕುರಿತು ಇಸ್ರೇಲ್ ಮಹಿಳೆ ಗಂಗಾವತಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಸಮಯದಲ್ಲಿ ಐವರು ನಾಲೆ ಬಳಿ ಹೋಗಿ ಕುಳಿತಿದ್ದೆವು. ಈ ವೇಳೆ ಇಲ್ಲಿ ಪೆಟ್ರೋಲ್ ಸಿಗುವುದು ಎಲ್ಲಿ ಎಂದು ಗಾಡಿಯಲ್ಲಿ ಬಂದ ಗುಂಪು ಕೇಳಿತುಗೊತ್ತಿಲಲಾ ಎಂದಾಗ ನೂರು ರೂ.ಕೊಡುವಂತೆ ಬೆದರಿಕೆ ಹಾಕಿದರು. ನಮ್ಮ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸಿದರು. ದಾಳಿಗೆ ಮುಂದಾದಾಗ ನಮ್ಮೊಂದಿಗೆ ಇದ್ದ ಮೂವರು ನಾಲೆಗೆ ಹಾರಿ ಜೀವ ಉಳಿಸಿಕೊಳ್ಳಲು ಮುಂದಾದರು. ನಮ್ಮನ್ನು ಎಳೆದಾಡಿ ಗುಂಪು ಅತ್ಯಾಚಾರವಸೆಗಿತು ಎಂದು ವಿವರಿಸಿದ್ದಾರೆ.
ಹೈದರಾಬಾದ್ ಮೂಲದ ವೈದ್ಯೆ ನದಿಗೆ ಜಿಗಿದು ಮೃತಪಟ್ಟ ಘಟನೆ ಬೆನ್ನಲ್ಲೇ ಅಘಾತಕಾರಿ ಘಟನೆ ನಡೆದಿದ್ದು, ಪ್ರವಾಸಿಗರಿಗೆ ಸಾಣಾಪುರ ಸೇಫ್ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಿಎಂ ಸಿದ್ದರಾಮಯ್ಯ ಟ್ವೀಟ್
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್ ಸ್ಟೇ ಮಾಲಕಿ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಅತ್ಯಂತ ಹೇಯ ಕೃತ್ಯ. ಘಟನೆ ವರದಿಯಾದ ಕೂಡಲೇ ಸಂಬಂಧಪಟ್ಟ ಪೊಲೀಸರಿಂದ ಮಾಹಿತಿ ಪಡೆದು, ಕಟ್ಟುನಿಟ್ಟಿನ ತನಿಖೆ ಕೈಗೊಂಡು, ಅಪರಾಧಿಗಳನ್ನು ಶೀಘ್ರ ಪತ್ತೆಹಚ್ಚುವಂತೆ ಸೂಚಿಸಿದ್ದೆ. ಪ್ರಕರಣದ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. ರಾಜ್ಯಕ್ಕೆ ಬರುವ ಪ್ರವಾಸಿಗರು ಸೇರಿದಂತೆ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
.
