
ನಡುರಸ್ತೆಯ ಮೇಲೆ ಸ್ಟಂಟ್ ಮಾಡುತ್ತಾ ಬೈಕ್ ಓಡಿಸುವ ಪುಂಡರು, ಹಲವರ ಜೀವ ಬಲಿ ಪಡೆದಿದ್ದಾರೆ. ಪೊಲೀಸರು ಎಷ್ಟೇ ಎಚ್ಚರಿಕೆಯನ್ನು ನೀಡಿದರೂ ಪುಂಡರು ಮಾತ್ರ ಬದಲಾಗುತ್ತಿಲ್ಲ. ಇದೇ ರೀತಿ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಪುಷ್ಪ ಶೈಲಿಯಲ್ಲಿ ಸ್ಟಂಟ್ ಮಾಡಿದ್ದ ಪುಂಡನಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ಪುಂಡನೊಬ್ಬ ಈ ರೀತಿಯಾಗಿ ಬೈಕ್ ಮೇಲೆ ಸ್ಟಂಟ್ ಮಾಡುತ್ತಾ ವಿಡಿಯೋ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಿದ್ದ. ಕೊನೆಗೆ ವಿಡಿಯೋ ವೈರಲ್ ಆಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪೊಲೀಸರಿಗೆ ಸುದ್ದಿ ಮುಟ್ಟಿದ್ದೇ ತಡ ಕಾರ್ಯಪ್ರವೃತ್ತರಾದ ಖಾಕಿ ಪಡೆ, ಪುಂಡನಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಹಾಗೂ ಮುಂದೆ ಈ ರೀತಿಯ ಕೃತ್ಯ ಯಾರೂ ನಡೆಸದಂತೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ಪುಂಡನ ಸೆರೆಹಿಡಿದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನ ಹಂಚಿಕೊಂಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸರು, ಪುಷ್ಪ ಶೈಲಿಯಲ್ಲಿ ಸ್ಟಂಟ್ ಮಾಡುತ್ತ ಹುಬ್ಬಳ್ಳಿ-ಗದಗ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ & ನಿರ್ಲಕ್ಷತನದಿಂದ ವಾಹನ ಚಾಲನೆ ಮಾಡುತ್ತಿದ್ದ ಯುವಕನ ವಿರುದ್ಧ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಾಹನ ಸೀಜ್ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.
