ಕೇರಳ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ವಿಪರೀತ ಮಳೆಯಾಗುತ್ತಿದ್ದು, ಪ್ರಸಿದ್ಧ ಮಧೂರು ದೇವಾಲಯದ ಪ್ರಾಂಗಣದೊಳಗೇ ನೀರು ನುಗ್ಗಿದೆ. ಕೇರಳದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಕಾಸರಗೋಡು ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿದೆ. ಇಂದೂ ಕೂಡಾ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆಯಾಗಿದೆ.ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದೆ.

ಈ ನಡುವೆ ಜಿಲ್ಲೆಯ ಪ್ರಸಿದ್ಧ ಗಣಪತಿ ದೇವರ ಸನ್ನಿಧಿಯಾಗಿರುವ ಮಧೂರು ದೇವಾಲಯದಲ್ಲಿ ಮಧುವಾಹಿನಿ ಹೊಳೆ ನೀರು ನುಗ್ಗಿದ್ದು ಪ್ರಾಂಗಣವಿಡೀ ನೀರಿನಲ್ಲಿ ಮುಳುಗಿದೆ. ನಿಂತರೆ ಸೊಂಟದವರೆಗೂ ನೀರು ನಿಲ್ಲುವಷ್ಟು ನೀರು ತುಂಬಿದೆ.

ಇದರಿಂದಾಗಿ ಭಕ್ತರು ನೀರಿನಲ್ಲಿಯೇ ದೇವರಿಗೆ ಪ್ರಾರ್ಥನೆ ಮಾಡುವ ಸ್ಥಿತಿ ಎದುರಾಗಿದೆ. ಪ್ರತೀ ಬಾರಿಯೂ ಇಲ್ಲಿ ಮಳೆಗಾಲದಲ್ಲಿ ನೀರು ದೇವಾಲಯಕ್ಕೆ ನುಗ್ಗುವುದು ಸಾಮಾನ್ಯವಾಗಿದೆ. ಈ ಬಾರಿಯೂ ದೇವಾಲಯದ ಸಮೀಪದಲ್ಲೇ ಇರುವ ಹೊಳೆ ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ಕಾರಣ ಎಲ್ಲಿ ನೋಡಿದರೂ ನೀರು ಎಂಬ ಪರಿಸ್ಥಿತಿಯಾಗಿದೆ.

ಇನ್ನು ಕೇರಳದಲ್ಲಿ ಇನ್ನೂ ಎರಡು ದಿನಗಳಿಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ ಮಳೆಯಿಂದ ಕೆಲವೆಡೆ ರಸ್ತೆ ಕುಸಿದ ಘಟನೆಗಳೂ ನಡೆದಿವೆ. ಸದ್ಯಕ್ಕೆ ಕೇರಳದ ಕಡಲತೀರಗಳಿಗೆ, ಪ್ರವಾಸೀ ತಾಣಗಳಿಗೆ ತೆರಳದಿರುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!