
ಪಾಕಿಸ್ತಾನದ ಜೊತೆ ಈಚೆಗೆ ನಡೆದ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಭಾರತವು ಕೆಲವು ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂಬುದನ್ನು ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಅನಿಲ್ ಚೌಹಾಣ್ ಶನಿವಾರ ಒಪ್ಪಿಕೊಂಡಿದ್ದಾರೆ.
ಆದರೆ, ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿರುವುದು ‘ಸಂಪೂರ್ಣ ತಪ್ಪು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬ್ಲೂಮ್‌ಬರ್ಗ್ ಟಿವಿ’ಗೆ ನೀಡಿರುವ ಸಂದರ್ಶನದಲ್ಲಿ ಚೌಹಾಣ್ ಅವರು, ‘ಯುದ್ಧ ವಿಮಾನ ಕಳೆದುಕೊಂಡಿದ್ದಕ್ಕಿಂತ ಅವುಗಳನ್ನು ಏಕೆ ಕಳೆದುಕೊಂಡೆವು ಎಂಬುದನ್ನು ಪತ್ತೆ ಮಾಡುವುದು ಮುಖ್ಯವಾಗುತ್ತದೆ’ ಎಂದು ಹೇಳಿದ್ದಾರೆ.
ಲೋಪಗಳನ್ನು ಸರಿಪಡಿಸಿಕೊಂಡ ಭಾರತೀಯ ಮಿಲಿಟರಿಯು ತಿರುಗೇಟು ನೀಡಿತು ಎಂದೂ ತಿಳಿಸಿದ್ದಾರೆ.
ಎಷ್ಟು ವಿಮಾನಗಳನ್ನು ಕಳೆದುಕೊಳ್ಳಲಾಯಿತು ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಲು ಚೌಹಾಣ್ ನಿರಾಕರಿಸಿದ್ದಾರೆ. ಆದರೆ, ಪಾಕಿಸ್ತಾನದ ಗಡಿಯ ಒಳಗೆ ಹೆಚ್ಚು ನಿಖರವಾದ ದಾಳಿಯನ್ನು ಭಾರತ ನಡೆಸಿದೆ ಎಂಬುದನ್ನು ಅವರು ತಿಳಿಸಿದ್ದಾರೆ.
ಪಾಕಿಸ್ತಾನದ ಜೊತೆಗಿನ ನಾಲ್ಕು ದಿನಗಳ ಸಂಘರ್ಷದಲ್ಲಿ ಭಾರತಕ್ಕೆ ಆದ ಹಾನಿಯ ಬಗ್ಗೆ ದೇಶದ ಮಿಲಿಟರಿಯ ಅತ್ಯಂತ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟವಾಗಿ ಹೇಳಿರುವುದು ಇದೇ ಮೊದಲು. ಚೌಹಾಣ್ ಅವರು ಸಿಂಗಪುರ ಭೇಟಿಯಲ್ಲಿದ್ದಾರೆ.
ಪಾಕಿಸ್ತಾನದ ಜೊತೆಗಿನ ಸಂಘರ್ಷದಲ್ಲಿ ಭಾರತ ಯುದ್ಧ ವಿಮಾನಗಳನ್ನು ಕಳೆದುಕೊಂಡಿತೇ ಎಂಬ ಪ್ರಶ್ನೆಯನ್ನು ಚೌಹಾಣ್ ಅವರ ಮುಂದಿರಿಸಲಾಗಿತ್ತು.
‘ಒಳ್ಳೆಯ ಸಂಗತಿ ಎಂದರೆ, ಕಾರ್ಯತಂತ್ರದಲ್ಲಿ ಆದ ಲೋಪವನ್ನು ನಾವು ಅರ್ಥ ಮಾಡಿಕೊಂಡೆವು. ಅದನ್ನು ಸರಿಪಡಿಸಿಕೊಂಡೆವು. ಎರಡು ದಿನಗಳ ನಂತರ ಪರಿಷ್ಕೃತ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತಂದೆವು. ನಮ್ಮ ಯುದ್ಧ ವಿಮಾನಗಳನ್ನು ಹಾರಿಸಿ, ಗುರಿಗಳ ಮೇಲೆ ದೂರದಿಂದಲೇ ದಾಳಿ ನಡೆಸಿದೆವು’ ಎಂದು ಚೌಹಾಣ್ ಮಾಹಿತಿ ನೀಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತವು ‘ಸಿಂಧೂರ ಕಾರ್ಯಾಚರಣೆ’ಯನ್ನು ಮೇ 7ರಂದು ಆರಂಭಿಸಿತ್ತು. ಬ್ರಹ್ಮೋಸ್‌ನಂತಹ ದೂರಗಾಮಿ ಅಸ್ತ್ರಗಳನ್ನು ಕಾರ್ಯಾಚರಣೆಯಲ್ಲಿ ಬಳಕೆ ಮಾಡಿಕೊಂಡಿತ್ತು.
ಮೇ 10ರಂದು ತಾನು ನಡೆಸಿದ ತೀಕ್ಷ್ಣ ದಾಳಿಯ ಕಾರಣದಿಂದಾಗಿ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಪಾಕಿಸ್ತಾನವು ದುಂಬಾಲು ಬಿದ್ದಿತ್ತು ಎಂದು ಭಾರತವು ಈಗಾಗಲೇ ಹೇಳಿದೆ.
‘ದಿ ಎಕನಾಮಿಸ್ಟ್’ ಪತ್ರಿಕೆಯ ರಕ್ಷಣಾ ವಿಷಯಗಳ ಸಂಪಾದಕರಲ್ಲಿ ಒಬ್ಬರಾದ ಶಶಾಂಕ್ ಜೋಷಿ ಅವರು, ‘ಸಂಘರ್ಷದ ಮೊದಲ ರಾತ್ರಿಯಂದು ಭಾರತವು ಯುದ್ಧ ವಿಮಾನಗಳನ್ನು ಕಳೆದುಕೊಂಡಿರಬಹುದು. ಸೂಕ್ತವಾದ ಶಸ್ತ್ರಾಸ್ತ್ರ ಇಲ್ಲದೆ ಹೀಗಾಗಿರಬಹುದು’ ಎಂದು ಹೇಳಿದ್ದಾರೆ.
ಪಾಶ್ಚಿಮಾತ್ಯ ದೇಶಗಳ ಅಧಿಕಾರಿಗಳ ಅಂದಾಜು ಆಧರಿಸಿ ಈ ಮಾತು ಆಡಿರುವುದಾಗಿ ಜೋಷಿ ತಿಳಿಸಿದ್ದಾರೆ.
ಅನಿಲ್ ಚೌಹಾಣ್, ಸಿಡಿಎಸ್‌ಯುದ್ಧ ವಿಮಾನ ಕಳೆದುಕೊಂಡಿದ್ದಕ್ಕಿಂತ ಅವುಗಳನ್ನು ಏಕೆ ಕಳೆದು ಕೊಂಡೆವು ಎಂಬುದು ಮುಖ್ಯ. ಕಾರ್ಯತಂತ್ರದಲ್ಲಿ ಆದ ಲೋಪ ಸರಿಪಡಿಸಿಕೊಂಡು ತಿರುಗೇಟು ನೀಡಿದೆವು






