
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಬೌಂಡರಿ ಲೈನ್ ಬಳಿ ತೆಗೆದುಕೊಳ್ಳುವ ಕ್ಯಾಚ್‌ಗಳ ಕುರಿತು ಹೊಸ ನಿಯಮಗಳನ್ನು ಪರಿಚಯಿಸಲು ಸಜ್ಜಾಗಿವೆ.
ಬನ್ನಿ ಹಾಪ್ ಕ್ಯಾಚ್ (Bunny half catch) ಅಂದರೆ ಚೆಂಡನ್ನು ಬೌಂಡರಿ ಲೈನ್‌ನ ಹೊರಗಿನಿಂದ ಮೇಲಕ್ಕೆ ಜಿಗಿದು ಒಳಗೆ ಎಸೆಯುವುದು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ.
ಆದಾಗ್ಯೂ, ಚೆಂಡನ್ನು ಬೌಂಡರಿಯ ಒಳಗಿನಿಂದಲೇ ಮೇಲಕ್ಕೆ ಎಸೆದು, ನಂತರ ಹೊರಗೆ ಹೋಗಿ ಮತ್ತೆ ಹಿಂದಕ್ಕೆ ಡೈವ್ ಮಾಡಿ ಕ್ಯಾಚ್ ಹಿಡಿದರೆ, ಅದನ್ನು ಕ್ಯಾಚ್ ಎಂದು ಪರಿಗಣಿಸಲಾಗುತ್ತದೆ. ಈ ತಿಂಗಳ ಅಂತ್ಯದಿಂದ ಈ ನಿಯಮ ಜಾರಿಗೆ ಬರಲಿದ್ದು, 2025ರ ಅಕ್ಟೋಬರ್ ತಿಂಗಳಲ್ಲಿ ಎಂಸಿಸಿಯ ಕ್ರಿಕೆಟ್ ನಿಯಮಗಳಲ್ಲಿ ಔಪಚಾರಿಕವಾಗಿ ಸೇರಿಸಲಾಗುವುದು.
ಉದಾಹರಣೆಗೆ, 2023ರ ಬಿಗ್ ಬ್ಯಾಷ್ ಲೀಗ್‌ನಲ್ಲಿ, ಮೈಕೆಲ್ ನೇಸರ್ ಬೌಂಡರಿ ಲೈನ್‌ನಲ್ಲಿ ಕ್ಯಾಚ್ ಪಡೆದರು. ಆದರೆ, ಸಮತೋಲನ ಕಳೆದುಕೊಂಡು ಚೆಂಡನ್ನು ಗಾಳಿಗೆ ಎಸೆದರು. ನಂತರ ಅವರು ಬೌಂಡರಿ ಲೈನ್ ದಾಟಿದರು. ಅಲ್ಲಿ, ಅವರು ಗಾಳಿಯಲ್ಲಿ ಹಾರಿ, ಚೆಂಡನ್ನು ಹಿಡಿದು ಮತ್ತೆ ಮೇಲಕ್ಕೆ ಎಸೆದರು. ಬಳಿಕ ಬೌಂಡರಿ ಲೈನ್ನಿಂದ ಒಳಗೆ ಬಂದು ಮತ್ತೆ ಮೈದಾನದಲ್ಲಿ ಕ್ಯಾಚ್ ಹಿಡಿದರು. ಇದರೊಂದಿಗೆ, ಬ್ಯಾಟರ್ ಔಟಾದರು. ಆ ಸಮಯದಲ್ಲಿ ಈ ಕ್ಯಾಚ್ ಬಗ್ಗೆ ಭಾರಿ ಗದ್ದಲ ಉಂಟು ಮಾಡಿತು. ಈ ಪ್ರಕ್ರಿಯೆಯಲ್ಲಿ, ಎಂಸಿಸಿ ಬನ್ನಿ ಹಾಪ್ಸ್ ಕ್ಯಾಚ್ ಕಾನೂನುಬಾಹಿರ ಎಂದು ಘೋಷಿಸಿದೆ.
ಆದಾಗ್ಯೂ, ಬೌಂಡರಿಯ ಒಳಗಿನಿಂದಲೇ ಚೆಂಡನ್ನು ಹಿಡಿದು ಮೇಲಕ್ಕೆ ಎಸೆದು ಬೌಂಡರಿಯ ಹೊರಗೆ ಹೋಗಿ, ನಂತರ ಅದನ್ನು ಹಿಡಿಯಲು ಮತ್ತೆ ಬೌಂಡರಿ ಒಳಗೆ ಡೈವ್ ಮಾಡಲು ಅವಕಾಶವಿದೆ. ಉದಾಹರಣೆಗೆ, ಈ ಕೆಳಗಿನ ವಿಡಿಯೋದಲ್ಲಿ ಹರ್ಲೀನ್ ಡಿಯೋಲ್ರಂತೆ ಕ್ಯಾಚ್ ಹಿಡಿದರೆ ಅದು ಮಾನ್ಯವಾಗಿರುತ್ತದೆ.
ಹೊಸ ನಿಯಮ ಯಾವಾಗ ಜಾರಿ?
ಹೊಸ ಕ್ಯಾಚ್ ನಿಯಮವನ್ನು ಜೂನ್ 17 ರಂದು ಗಾಲೆಯಲ್ಲಿ ನಡೆಯಲಿರುವ ಶ್ರೀಲಂಕಾ vs ಬಾಂಗ್ಲಾದೇಶ್ ನಡುವಣ ಪಂದ್ಯದಲ್ಲಿ ಪರಿಚಯಿಸಲು ಐಸಿಸಿ ನಿರ್ಧರಿಸಿದೆ. ಅಲ್ಲದೆ ಅಕ್ಟೋಬರ್ 2026 ರಲ್ಲಿ ಈ ನಿಯಮ ಅಧಿಕೃತವಾಗಿ ಜಾರಿಗೊಳ್ಳಲಿದೆ ಎಂದು ತಿಳಿಸಲಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ಈ ನಿಯಮಗಳನ್ನು ಲೀಗ್ ಕ್ರಿಕೆಟ್ನಲ್ಲಿ ಬಳಸಿಕೊಳ್ಳಬಹುದಾಗಿದೆ.






