ಕಳೆದ ಎರಡು ದಿನಗಳಿಂದ ವಿಧಾನಸೌಧದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಐಪಿಎಲ್ (IPL) ಟಿಕೆಟ್ ವಿವಾದಕ್ಕೆ ಈಗ ತೆರೆ ಬಿದ್ದಿದೆ. ಶನಿವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯಲಿರುವ ಆರ್ ಸಿಬಿ (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯಕ್ಕೆ ಶಾಸಕರಿಗೆ (MLA) ಟಿಕೆಟ್ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಕೊನೆಗೂ ಒಪ್ಪಿಕೊಂಡಿದೆ.
ನಾಳೆಯ ಪಂದ್ಯಕ್ಕೆ ಆಹ್ವಾನ ನೀಡುವ ಸಲುವಾಗಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಪದಾಧಿಕಾರಿಗಳ ತಂಡ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ‘ಕಾವೇರಿ’ ನಿವಾಸದಲ್ಲಿ ಭೇಟಿ ಮಾಡಿತು. ಇದೇ ವೇಳೆ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರು ಸದನದಲ್ಲಿ ಇಟ್ಟಿದ್ದ ಟಿಕೆಟ್ ಬೇಡಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದರು.
ಶಾಸಕರಿಗೆ 1+1 ಟಿಕೆಟ್ ಫಿಕ್ಸ್
ಶಾಸಕರು ತಲಾ ನಾಲ್ಕು ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿರುವ ವಿಷಯವನ್ನು ಸಿಎಂ ಕೆಎಸ್‌ಸಿಎ ಪದಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟೇಶ್ ಪ್ರಸಾದ್ ಅವರು ಶಾಸಕರ ಬೇಡಿಕೆಗೆ ಸಮ್ಮತಿ ಸೂಚಿಸಿದರು. ಈಗಾಗಲೇ ನಾಳಿನ ಪಂದ್ಯದ ಬಹುತೇಕ ಟಿಕೆಟ್‌ಗಳು ಮಾರಾಟವಾಗಿರುವ ಕಾರಣ, ನಾಳಿನ ಪಂದ್ಯಕ್ಕೆ ಪ್ರತಿಯೊಬ್ಬ ಶಾಸಕರಿಗೆ ‘1+1’ (ಒಬ್ಬ ಶಾಸಕ ಹಾಗೂ ಅವರ ಜೊತೆಗೊಬ್ಬರು) ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.
ಮುಂದಿನ ಪಂದ್ಯಗಳಿಗೆ ಬಂಪರ್ ಆಫರ್
ಇನ್ನು ಬೆಂಗಳೂರಿನಲ್ಲಿ ಮುಂದೆ ನಡೆಯಲಿರುವ ಐಪಿಎಲ್ ಪಂದ್ಯಗಳಿಗೆ ಪ್ರತಿ ಶಾಸಕರಿಗೆ ತಲಾ ನಾಲ್ಕು ಟಿಕೆಟ್ ನೀಡುವುದಾಗಿ ಕೆಎಸ್‌ಸಿಎ ಭರವಸೆ ನೀಡಿದೆ. ಕೆಎಸ್‌ಸಿಎ ಸದಸ್ಯರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಕೂಡ ಶಾಸಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಂಸ್ಥೆಯ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ನಿರ್ಧಾರದೊಂದಿಗೆ ಕಳೆದ ಕೆಲವು ದಿನಗಳಿಂದ ಶಾಸಕರು ಮತ್ತು ಕೆಎಸ್‌ಸಿಎ ನಡುವೆ ನಡೆಯುತ್ತಿದ್ದ ಶೀತಲ ಸಮರಕ್ಕೆ ತಾತ್ಕಾಲಿಕ ವಿರಾಮ ಬಿದ್ದಂತಾಗಿದೆ.
ಶಾಸಕರ ಮಾತಿಗೆ ತೇಜಸ್ವಿ ಗರಂ.
ಶಾಸಕರ ಈ ವಿಐಪಿ ಟಿಕೆಟ್ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಟುವಾಗಿ ಟೀಕಿಸಿದ್ದಾರೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಸದನದಲ್ಲಿ ಐಪಿಎಲ್ ಟಿಕೆಟ್‌ಗಾಗಿ ಪಟ್ಟು ಹಿಡಿಯುವುದು ವಿಧಾನಸೌಧದ ಘನತೆಗೆ ತಕ್ಕುದಲ್ಲ. ಜನಸಾಮಾನ್ಯರು ಕಷ್ಟಪಟ್ಟು ಹಣ ನೀಡಿ ಟಿಕೆಟ್ ಖರೀದಿಸುವಾಗ ಶಾಸಕರಿಗೆ ಮಾತ್ರ ಯಾಕೆ ಉಚಿತವಾಗಿ ನೀಡಬೇಕು? ಇದು ಜನಪ್ರತಿನಿಧಿಗಳ ಅಹಂಕಾರದ ಪರಮಾವಧಿ ಎಂದು ಅವರು ಖಂಡಿಸಿದ್ದಾರೆ
ಆದರೆ, ಈ ವಿವಾದದಲ್ಲಿ ಶಾಸಕರ ಬೆಂಬಲಕ್ಕೆ ನಿಂತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕರು ಸರ್ಕಾರದ ವ್ಯವಸ್ಥೆಯ ಒಂದು ಭಾಗ. ಅವರು ಟಿಕೆಟ್ ಕೇಳುವುದರಲ್ಲಿ ತಪ್ಪೇನಿಲ್ಲ. ನಾನು ಈ ಬಗ್ಗೆ ಕೆಎಸ್‌ಸಿಎ ಪದಾಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ತೇಜಸ್ವಿ ಸೂರ್ಯ ಅವರ ಟೀಕೆಗೆ ತಿರುಗೇಟು ನೀಡಿರುವ ಡಿಕೆಶಿ, ಸೂರ್ಯ ಅವರು ಮೊದಲು ತಮ್ಮ ಪಕ್ಷದ ಶಾಸಕರಿಗೆ ಬುದ್ಧಿ ಹೇಳಲಿ ಎಂದು ಲೇವಡಿ ಮಾಡಿದ್ದಾರೆ.














