ಪುತ್ತೂರು, ಆ. 11: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಮಾನವಿಕ ವಿಭಾಗದ ವತಿಯಿಂದ ವಿದ್ಯಾರ್ಥಿಗಳಲ್ಲಿ ಕೃಷಿ ಪರಂಪರೆ, ಮಣ್ಣಿನೊಂದಿಗೆ ನಂಟು ಹಾಗೂ ಸಮುದಾಯದ ಒಗ್ಗಟ್ಟಿನ ಮಹತ್ವವನ್ನು ಮೂಡಿಸುವ ಉದ್ದೇಶದಿಂದ ‘ಫಿಲೋ ಕೆಸರ್ದ ಗೊಬ್ಬು’ ಕಾರ್ಯಕ್ರಮವನ್ನು ಆ.10ರಂದು ಅಳಕೆಮಜಲಿನಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ.ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರು ಮಾತನಾಡಿ, ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯ, ಮಣ್ಣಿನೊಂದಿಗೆ ಮಾನವನಿಗಿರುವ ಅವಿನಾಭಾವ ಸಂಬಂಧ ಹಾಗೂ ಸಮುದಾಯದ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.ಮುಖ್ಯ ಅತಿಥಿಯಾಗಿದ್ದ ಪ್ರಗತಿಪರ ಕೃಷಿಕ ಚಿದಾನಂದ ಗೌಡ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಕೃಷಿ ಜೀವನದ ಅನುಭವವನ್ನು ನೇರವಾಗಿ ಪರಿಚಯಿಸುವ ಕಾರ್ಯಕ್ರಮದ ಮಹತ್ವವನ್ನು ಶ್ಲಾಘಿಸಿ, ಆಯೋಜಕರಿಗೆ ಶುಭ ಹಾರೈಸಿದರು.ಮಾನವಿಕ ವಿಭಾಗದ ಡೀನ್ ಹಾಗೂ ಶೈಕ್ಷಣಿಕ ರಿಜಿಸ್ಟ್ರಾರ್ ಡಾ. ನಾರ್ಬರ್ಟ್ ಮಸ್ಕರೇನಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಭಾಗದ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.ವೈಷ್ಣವಿ ಮತ್ತು ತಂಡದ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ದ್ವಿತೀಯ ಬಿ.ಎ. ವಿದ್ಯಾರ್ಥಿ ಸಮರ್ಥ್ ಸ್ವಾಗತಿಸಿದರು. ತೃತೀಯ ಬಿ.ಎ. ವಿದ್ಯಾರ್ಥಿನಿ ಕೃತಿಕಾ ನಿರೂಪಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಕೃತಿ ವಂದಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೆಸರಿನಲ್ಲಿ ಇಳಿದು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅನುಭವ ಪಡೆದರು. ಈ ಮೂಲಕ ಮಣ್ಣಿನೊಂದಿಗೆ ಅವರ ನಂಟು ಗಟ್ಟಿಯಾಗುವುದರ ಜೊತೆಗೆ ಕೃಷಿ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಅರಿವು ಮೂಡಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.










