ವಿದ್ಯಾರ್ಥಿಗಳನ್ನು ಅಪಹರಿಸಿ ಹಲ್ಲೆ: ಹಿರಿಯರ ವಿರುದ್ಧ ಪ್ರಕರಣ ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಇಬ್ಬರು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಬಲವಂತವಾಗಿ ಕರೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.ಈ ಕುರಿತು ವಿದ್ಯಾರ್ಥಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಆದಿಲ್ ಎಂ., ಅರ್ಷಕ್, ಅನೀಶ್, ಉವೈಸ್, ನಾಶೀದ್ ಅಮೀರ್, ರೋಹನ್ ರಮೇಶ್, ಆದಿಲ್ ವಿ.ಪಿ., ರೆಹಾನ್ ಎಂ.ಪಿ., ಶಿನಾಸ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಆ.19ರಂದು ಮಧ್ಯಾಹ್ನ 3.19ರ ಸುಮಾರಿಗೆ ವಿದ್ಯಾರ್ಥಿಗಳು ಕಾಲೇಜಿನಿಂದ ನಡೆದುಕೊಂಡು ಸಾರ್ವಜನಿಕ ರಸ್ತೆಯಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಹಿರಿಯ ವಿದ್ಯಾರ್ಥಿಗಳ ಗುಂಪು ಅವರನ್ನು ಬಲವಂತವಾಗಿ ಎಳೆದುಕೊಂಡು ಹೋಗಿದೆ. ಬಳಿಕ ಬೈಕ್‌ನಲ್ಲಿ ಕರೆದೊಯ್ದು ಮನೆಯೊಂದರ ಕೊಠಡಿಯಲ್ಲಿ ಕೂಡಿ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಅಲ್ಲಿ ಇಬ್ಬರು ವಿದ್ಯಾರ್ಥಿಗಳ ಬಟ್ಟೆಗಳನ್ನು ಬಿಚ್ಚಿಸಿ ಚಡ್ಡಿಯಲ್ಲಿ ನಿಲ್ಲಿಸಿ, ಬೊಬ್ಬೆ ಹಾಕದಂತೆ ಮುಖಕ್ಕೆ ಬಟ್ಟೆ ಒತ್ತಿಹಿಡಿದು ಹಲ್ಲೆ ನಡೆಸಲಾಗಿದೆ. ನಾಶೀದ್ ಅಮೀರ್ ಬೆಲ್ಟ್‌ನಿಂದ, ಆದಿಲ್ ಎಂ. ಹ್ಯಾಂಗರ್‌ನಿಂದ ಹಾಗೂ ಇತರರು ಕೈಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ವೇಳೆ ರೆಹಾನ್ ಎಂ.ಪಿ. ಎಂಬಾತ ಕಬ್ಬಿಣದ ಪಂಚ್‌ನಿಂದ ವಿದ್ಯಾರ್ಥಿಯ ತಲೆ ಹಾಗೂ ಕುತ್ತಿಗೆಗೆ ಗುರಿಯಿಟ್ಟು ಹಲ್ಲೆ ನಡೆಸಲು ಮುಂದಾಗಿದ್ದಾನೆ. ವಿದ್ಯಾರ್ಥಿ ತಪ್ಪಿಸಿಕೊಂಡ ಪರಿಣಾಮ ಪಂಚ್ ತಲೆಯ ಹಿಂಭಾಗಕ್ಕೆ ಉಜ್ಜಿಕೊಂಡು ಹೋಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಬ್ಬ ವಿದ್ಯಾರ್ಥಿಯ ಮೇಲೂ ಕಬ್ಬಿಣದ ಪಂಚ್‌ನಿಂದ ಹಲ್ಲೆ ನಡೆಸಲು ಯತ್ನಿಸಿ, ಹೊಡೆತ ಎಡಭುಜಕ್ಕೆ ಬಿದ್ದಿದೆ ಎಂದು ಆರೋಪಿಸಲಾಗಿದೆ.ಘಟನೆಯನ್ನು ಅರ್ಷಕ್ ಎಂಬಾತ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ನೀರು ಕೇಳಿದಾಗ ಕಲುಷಿತ ನೀರು ತಂದು ನೀಡಿದ್ದು, ಕುಡಿಯದಿದ್ದಾಗ ಮೈಮೇಲೆ ಚೆಲ್ಲಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರ‍್ಯಾಗಿಂಗ್ ಬಗ್ಗೆ ಪೊಲೀಸರಿಗೆ ಅಥವಾ ಯಾರಿಗಾದರೂ ಮಾಹಿತಿ ನೀಡಿದರೆ ಕಾಲೇಜಿನಲ್ಲಿ ಚಾಕುವಿನಿಂದ ತುಂಡು ತುಂಡಾಗಿ ಕತ್ತರಿಸುವುದಾಗಿ ಉವೈಸ್ ಎಂಬಾತ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಜೆ ಸುಮಾರು 6 ಗಂಟೆಯವರೆಗೆ ವಿದ್ಯಾರ್ಥಿಗಳನ್ನು ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು ಎನ್ನಲಾಗಿದೆ.ಬಳಿಕ ಕಾಲೇಜಿಗೆ ತೆರಳಿದಾಗ ನಾಶೀದ್ ಅಮೀರ್ ಕ್ಲೀನ್ ಶೇವ್ ಮಾಡಿಕೊಂಡು ಬರಬೇಕು ಹಾಗೂ ಶೂ ಧರಿಸಬಾರದು ಎಂದು ಸೂಚಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.ಘಟನೆಯಿಂದ ಭಯಗೊಂಡ ವಿದ್ಯಾರ್ಥಿಗಳು ಮನೆಯವರಿಗೆ ಮಾಹಿತಿ ನೀಡಿದ್ದು, ಮನೆಯವರ ಸಲಹೆಯಂತೆ ಠಾಣೆಗೆ ದೂರು ನೀಡಲು ವಿಳಂಬವಾಗಿದೆ ಎಂದು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.











