ಬಂಟ್ವಾಳ: ತುಂಬೆ ಗ್ರಾಮದ ಕೆಳಗಿನ ತುಂಬೆ ಎಂಬಲ್ಲಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ತೆಗೆದು ಲಾರಿಗಳಿಗೆ ತುಂಬಿಸುತ್ತಿದ್ದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಮೂರು ಟಿಪ್ಪರ್ ಲಾರಿ ಹಾಗೂ ಒಂದು ಜೆಸಿಬಿ ಸೇರಿದಂತೆ ಸುಮಾರು ₹25.24 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಸೆ.25ರಂದು ಮುಂಜಾನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ರನ್ನಗೌಡ ಪಾಟೀಲ ಅವರಿಗೆ ಲಭಿಸಿದ ಮಾಹಿತಿಯ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮೂರು ಟಿಪ್ಪರ್ ಲಾರಿ ಹಾಗೂ ಒಂದು ಜೆಸಿಬಿ ಪತ್ತೆಯಾಗಿದೆ. ವಾಹನಗಳಲ್ಲಿ ಅಕ್ರಮವಾಗಿ ಮರಳು ತುಂಬಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.ಈ ವೇಳೆ ಮರಳು ತುಂಬಿದ್ದ KA-06-D-8454, KA-19-AF-9094 ಹಾಗೂ KA-19-AB-1508 ನೋಂದಣಿ ಸಂಖ್ಯೆಯ ಮೂರು ಟಿಪ್ಪರ್ ಲಾರಿಗಳು ಮತ್ತು KA-20-N-7175 ನೋಂದಣಿ ಸಂಖ್ಯೆಯ ಜೆಸಿಬಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಸುಮಾರು ಎರಡು ಲೋಡ್ ಮರಳು ಹಾಗೂ ಮರಳು ತುಂಬಲು ಬಳಸುತ್ತಿದ್ದ ಸಾಮಗ್ರಿಗಳನ್ನೂ ಜಪ್ತಿ ಮಾಡಲಾಗಿದೆ.ಮರಳು ಸಾಗಾಟಕ್ಕೆ ಯಾವುದೇ ಅನುಮತಿ ಹೊಂದಿರದೆ ನದಿ ಕಿನಾರೆಯಿಂದ ಮರಳು ಸಂಗ್ರಹಿಸಿ ಲಾರಿಗಳಿಗೆ ತುಂಬಿಸಿ ಸಾಗಿಸುತ್ತಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ನಿಹಾನ್, ರಾಜೀಕ್, ಮೊಹಮ್ಮದ್ ಶಂಶೀರ್, ಮಹಮ್ಮದ್ ಅಶ್ರಫ್, ಸ್ಟೀವನ್ ಡಿಸೋಜಾ, ಕೃತ್ಯಕ್ಕೆ ಸಹಕರಿಸಿದ ರೈಟರ್ ಶಿವಪ್ರಸಾದ್ ಆಳ್ವ ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 129/2026ರಂತೆ ಪ್ರಕರಣ ದಾಖಲಾಗಿದೆ.**KMMC Rules-1994ರ ಕಲಂ 42, 43, 44, MMRD Actರ ಕಲಂ 4(1), 4(1A), 21(1), 21(1A) ಹಾಗೂ ಬಿಎನ್‌ಎಸ್-2023ರ ಕಲಂ 303(2)**ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.











