ವಿಟ್ಲ, ಸೆ.25: ಉಕ್ಕುಡ ಸಮೀಪದ ಕಪ್ಪುಕಲ್ಲಿನ ಕ್ವಾರಿಗೆ ಮೂರು ಕಾಡುಕೋಣಗಳು ಬಿದ್ದು ಗಾಯಗೊಂಡು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.ಶುಕ್ರವಾರ ಬೆಳಿಗ್ಗೆ ಸಮೀಪದ ಅರಣ್ಯ ಪ್ರದೇಶದಿಂದ ಮೂರು ಕಾಡುಕೋಣಗಳು ಕ್ವಾರಿ ಪ್ರದೇಶಕ್ಕೆ ಬಂದಿದ್ದವು ಎನ್ನಲಾಗಿದೆ. ಅವುಗಳನ್ನು ಕ್ವಾರಿಯಿಂದ ಹೊರಗೆ ಕಳುಹಿಸಲು ಸ್ಥಳೀಯರು ಹಾಗೂ ಇತರರು ಪ್ರಯತ್ನಿಸಿದಾಗ ಭಯಗೊಂಡ ಕಾಡುಕೋಣಗಳು ಎಲ್ಲೆಂದರಲ್ಲಿ ಓಡಾಡಿದ್ದು, ಕ್ವಾರಿಯಲ್ಲಿದ್ದ ಗುಂಡಿಗಳಿಗೆ ಬಿದ್ದು ಗಾಯಗೊಂಡಿವೆ. ಬಳಿಕ ಮೂರು ಕಾಡುಕೋಣಗಳೂ ಮೃತಪಟ್ಟಿವೆ.ಮೃತ ಕಾಡುಕೋಣಗಳಲ್ಲಿ ಎರಡು ಹೆಣ್ಣು ಹಾಗೂ ಒಂದು ಮರಿ ಸೇರಿವೆ ಎನ್ನಲಾಗಿದೆ. ಕ್ವಾರಿಯ ಸುತ್ತ ಸೂಕ್ತ ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದೂ ಘಟನೆಗೆ ಕಾರಣವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಕೋಣಗಳ ರಕ್ಷಣೆಗೆ ಪ್ರಯತ್ನಿಸಿದರೂ, ಅಷ್ಟರಲ್ಲಾಗಲೇ ಅವು ಮೃತಪಟ್ಟಿದ್ದವು. ಬಳಿಕ ಮೃತ ಕಾಡುಕೋಣಗಳ ದೇಹಗಳನ್ನು ರಕ್ಷಿತಾರಣ್ಯ ಪ್ರದೇಶಕ್ಕೆ ಕೊಂಡೊಯ್ಯಲಾಗಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅರಣ್ಯ ಇಲಾಖೆಯ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!