ಪುತ್ತೂರು, ಸೆ.25: ಪುತ್ತೂರಿನ ಬಹುಕಾಲದ ಬೇಡಿಕೆಯಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜಿನ ಆರಂಭಿಕ ಹಂತವಾಗಿ ಸೇಡಿಯಾಪಿನಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು.ಮೆಡಿಕಲ್ ಕಾಲೇಜಿಗೆ ಈಗಾಗಲೇ ₹550 ಕೋಟಿ ಮಂಜೂರಾಗಿದ್ದು, ₹182 ಕೋಟಿ ವೆಚ್ಚದಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗಲಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಆಸ್ಪತ್ರೆಯನ್ನು ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ತರುವ ಭರವಸೆ ನೀಡಿದಾಗ ಅನೇಕರು ನಂಬಿರಲಿಲ್ಲ. ಹಿಂದಿನ ಶಾಸಕಿ ಶಕುಂತಳಾ ಶೆಟ್ಟಿ ಅವರ ಅವಧಿಯಲ್ಲಿ ಆರಂಭವಾಗಿದ್ದ ಮೆಡಿಕಲ್ ಕಾಲೇಜಿನ ಹೋರಾಟವನ್ನು ಮುಂದುವರಿಸಿ ಇದೀಗ ಈ ಹಂತಕ್ಕೆ ತಲುಪಿದ್ದೇವೆ ಎಂದರು.ಮುಂದಿನ ಒಂದು ತಿಂಗಳೊಳಗೆ ಮುಖ್ಯಮಂತ್ರಿ ಅವರಿಂದ ಮೆಡಿಕಲ್ ಕಾಲೇಜಿನ ಬೃಹತ್ ಶಿಲಾನ್ಯಾಸ ನೆರವೇರಿಸುವ ಉದ್ದೇಶವಿದೆ. ಕಾಲೇಜಿನಲ್ಲಿ ಎಂಬಿಬಿಎಸ್, ಫಿಸಿಯೋಥೆರಪಿ, ನರ್ಸಿಂಗ್, ಡೆಂಟಲ್, ಆಯುರ್ವೇದ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಆರಂಭಿಸುವ ಉದ್ದೇಶವಿದೆ. ಹೊರ ಜಿಲ್ಲೆಗಳಿಂದ ಸುಮಾರು 25 ಸಾವಿರ ಮಂದಿ ಪುತ್ತೂರಿಗೆ ಆಗಮಿಸುವ ನಿರೀಕ್ಷೆಯಿದ್ದು, 10ರಿಂದ 12 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಇದರಿಂದ ಪುತ್ತೂರಿನ ಆರ್ಥಿಕ ಚಟುವಟಿಕೆ ಹಾಗೂ ನಗರಾಭಿವೃದ್ಧಿಗೆ ವೇಗ ದೊರೆಯಲಿದೆ ಎಂದು ಹೇಳಿದರು.ಹೋರಾಟ ಸಮಿತಿ ಸದಸ್ಯರಿಗೆ ಗೌರವಮೆಡಿಕಲ್ ಕಾಲೇಜು ಹೋರಾಟ ಸಮಿತಿ ನಡೆಸಿದ ಹೋರಾಟ ಹಾಗೂ ಶಾಸಕರ ಪ್ರಯತ್ನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದ ಸಮಿತಿ ಸದಸ್ಯರಾದ ದಿನೇಶ್ ಭಟ್, ರಾಜೇಶ್ ಕೃಷ್ಣ, ವೆಂಕಟ್ರಮಣ ಪುಣಚ, ಸಂಜೀವ ಕಬಕ, ಸಂದೀಪ್ ಲೊಬೊ, ದಿನೇಶ್ ಹೆಗ್ಡೆ, ಅಶೋಕ್ ಅಡ್ಯಂತ್ತಾಯ, ಡಾ. ಸಂದೀಪ್, ಜೆವಿಯರ್ ಡಿ’ಸೋಜ, ವಿಶ್ವಪ್ರಸಾದ್ ಸೇಡಿಯಾಪು, ಎಂ.ಬಿ. ವಿಶ್ವನಾಥ ರೈ, ಅಮಳ ರಾಮಚಂದ್ರ ಭಟ್, ಸೇಡಿಯಾಪು ಜನಾರ್ದನ ಭಟ್, ರಘುನಾಥ ರಾವ್ ಹಾಗೂ ಉಲ್ಲಾಸ್ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು.ಶಾಸಕರು ಭೂಮಿಪೂಜೆ ನೆರವೇರಿಸಿ ಕೆಸರುಕಲ್ಲು ಹಾಕಿ, ಹಾಲು, ಜೇನು, ತುಪ್ಪ ಹಾಗೂ ಸೀಯಾಳ ಅರ್ಪಿಸಿದರು. ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮೊಹಮ್ಮದ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಹೋರಾಟ ಸಮಿತಿಯ ಪ್ರಮುಖ ಸೇಡಿಯಾಪು ವಿಶ್ವಪ್ರಸಾದ್ ಭಟ್, ಕಾಂಗ್ರೆಸ್ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷ ಡಾ. ರಾಜಾರಾಮ್, ಪಂಚ ಗ್ಯಾರೆಂಟಿ ಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.ಮುರಳಿಧರ ರೈ ಮಠಂತಬೆಟ್ಟು ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!